ADVERTISEMENT

ಶೆಹ್ಲಾ ಮಸೂದ್ ಹತ್ಯೆ: ತನಿಖೆ ಆರಂಭಿಸಿದ ಸಿಬಿಐ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2011, 19:30 IST
Last Updated 5 ಸೆಪ್ಟೆಂಬರ್ 2011, 19:30 IST

ಭೋಪಾಲ್ (ಐಎಎನ್‌ಎಸ್): ಮಾಹಿತಿ ಹಕ್ಕು ಕಾರ್ಯಕರ್ತೆ ಶೆಹ್ಲಾ ಮಸೂದ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸೋಮವಾರ ತನಿಖೆ ಆರಂಭಿಸಿದ್ದು, ಭೋಪಾಲ್‌ನಲ್ಲಿರುವ ಮಸೂದ್ ನಿವಾಸಕ್ಕೆ ತೆರಳಿ ಕೊಲೆ ನಡೆದ ಸ್ಥಳದಲ್ಲಿ ಅಧ್ಯಯನ ನಡೆಸಿತು.

`ಭ್ರಷ್ಟಾಚಾರ ವಿರುದ್ಧದ ಭಾರತ~ ನಾಗರಿಕರ ಚಳವಳಿ ಸಂಘಟನೆಯ ಮಧ್ಯಪ್ರದೇಶ ಘಟಕ ಮುಖ್ಯಸ್ಥರಾಗಿದ್ದ ಶೆಹ್ಲಾ ಮಸೂದ್ ಅವರನ್ನು ಆ.16ರಂದು ಅವರ ನಿವಾಸದ ಹೊರಗೆ ಕಾರಿನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ಈ ಹತ್ಯೆ ಸಂಬಂಧ, ಸಿಬಿಐಯು ಬಿಜೆಪಿಯ ರಾಜ್ಯಸಭಾ ಸದಸ್ಯ ತರುಣ್ ವಿಜಯ್, ಭೋಪಾಲ್ ಶಾಸಕ ಧುೃವ ನಾರಾಯಣ ಸಿಂಗ್ ಮತ್ತು ಐಜಿಪಿ ಪವನ್ ಶ್ರೀವಾತ್ಸವ ಅವರನ್ನು ವಿಚಾರಣೆ ನಡೆಸಲಿದೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಶೆಹ್ಲಾ ಮಾಡಿರುವ ದೂರವಾಣಿ ಕರೆಗಳ ಆಧಾರದಲ್ಲಿ ಮಧ್ಯಪ್ರದೇಶ ಪೊಲೀಸರು ಈಗಾಗಲೇ ಈ ಮೂವರನ್ನು ವಿಚಾರಣೆ ನಡೆಸಿದ್ದಾರೆ.ತರುಣ್ ವಿಜಯ್ ಮತ್ತು ಸಿಂಗ್ ಶೆಹ್ಲಾ ಮಸೂದ್ ಅವರಿಗೆ ತುಂಬಾ ಆತ್ಮೀಯರಾಗಿದ್ದರು ಎಂದು ಹೇಳಲಾಗಿದೆ.

ಐಜಿಪಿ ಶ್ರೀವಾತ್ಸವ ಅವರು ಶೆಹ್ಲಾ ಮಸೂದ್‌ಗೆ ಈ ಹಿಂದೆ ಬೆದರಿಕೆ ಒಡ್ಡಿದ್ದರು ಎನ್ನಲಾಗಿದೆ. ಈ ಬಗ್ಗೆ 2008 ಮತ್ತು 2010ರಲ್ಲಿ ಮಸೂದ್ ಪೊಲೀಸರಿಗೆ ಪತ್ರವನ್ನೂ ಬರೆದಿದ್ದರು.

ಶೆಹ್ಲಾ ಮಸೂದ್  ಕೊಲೆಯಾಗುವ ಅರ್ಧ ಗಂಟೆ ಮೊದಲು ವಿಜಯ್ ಅವರೊಂದಿಗೆ ಮಾತನಾಡಿದ್ದರು ಎಂದು ಮೂಲಗಳು ತಿಳಿಸಿವೆ.ಈ ಮಧ್ಯೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿರುವುದಕ್ಕೆ ಶೆಹ್ಲಾ ತಂದೆ ಸುಲ್ತಾನ್ ಮಸೂದ್ ಕೃತಜ್ಞತೆ ಸಲ್ಲಿಸಿದ್ದಾರೆ. ನ್ಯಾಯ ಸಿಗುವ ವಿಶ್ವಾಸ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.