ADVERTISEMENT

ಶೇ10 ಕಡುಬಡವರು: 2011-12ನೇ ಸಾಲಿನ ರಾಷ್ಟ್ರೀಯ ಮಾದರಿ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ನವದೆಹಲಿ (ಪಿಟಿಐ): ಎರಡು ದಶಕಗಳ ಆರ್ಥಿಕ ಸುಧಾರಣೆಯ ಬಗ್ಗೆ ನಾವು ಹೆಮ್ಮೆ ಪಟ್ಟುಕೊಳ್ಳುತ್ತೇವೆ. ಸಮಗ್ರ ಅಭಿವೃದ್ಧಿಯ ಬಗ್ಗೆ ದೊಡ್ಡ ಮಾತುಗಳನ್ನು ಆಡುತ್ತೇವೆ. ಆದರೆ ಗ್ರಾಮೀಣ ಪ್ರದೇಶದ ಚಿತ್ರಣಗಳು ಇವನ್ನೆಲ್ಲ ಅಣಕಿಸುವಂತಿವೆ. ಇಲ್ಲಿ ಶೇ10ರಷ್ಟು ಮಂದಿ 17 ರೂಪಾಯಿಗಿಂತ ಕಡಿಮೆ ಹಣದಲ್ಲಿ ನಿತ್ಯದ ಬದುಕು ಸಾಗಿಸುತ್ತಿದ್ದಾರೆ. ಅಂದರೆ ಇವರು  ಕಡುಬಡವರು.

ಮನೆ ಬಳಕೆ ವೆಚ್ಚ ಕುರಿತಂತೆ 2011-12ನೇ ಸಾಲಿನಲ್ಲಿ ಸರ್ಕಾರ ನಡೆಸಿದ ಸಮೀಕ್ಷೆಯ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ಶೇ10ರಷ್ಟು ಕಡು ಬಡವರ ಮಾಸಿಕ ತಲಾ ಖರ್ಚು 503.49 ರೂಪಾಯಿ. ಇವರಿಗೆ ಹೋಲಿಸಿದರೆ ನಗರದಲ್ಲಿರುವ ಬಡವರೇ ತುಸು ವಾಸಿ. ಇವರ ನಿತ್ಯದ ತಲಾ ಖರ್ಚು 23.40 ರೂಪಾಯಿ.

ರಾಷ್ಟ್ರೀಯ ಮಾದರಿ ಸಮೀಕ್ಷಾ ಸಂಸ್ಥೆ (ಎನ್‌ಎಸ್‌ಎಸ್‌ಒ)ಯು 2011ರ ಜುಲೈನಿಂದ 2012ರ ಜೂನ್‌ವರೆಗೆ ನಡೆಸಿದ ಸಮೀಕ್ಷೆಯ ಪ್ರಕಾರ, ನಗರದಲ್ಲಿರುವ ಶೇ 10ರಷ್ಟು ಕಡು ಬಡವರ ತಲಾ ಮಾಸಿಕ ಖರ್ಚು 702.26 ರೂಪಾಯಿ ಆಗಿತ್ತು.

1991ರಲ್ಲಿ ಆರ್ಥಿಕ ಸುಧಾರಣೆಗೆ ಚಾಲನೆ ನೀಡಿ ಸರಿ ಸುಮಾರು ಎರಡು ದಶಕಗಳ ನಂತರ ಈ ಸಮೀಕ್ಷೆ ಮಾಡಲಾಗಿದೆ. ದೇಶದ ಜನರ ಜೀವನ ಮಟ್ಟವನ್ನು ಅಳೆಯುವುದು ಇದರ ಉದ್ದೇಶವಾಗಿತ್ತು. 2009-11ನೇ ಸಾಲಿಗೆ ಯೋಜನಾ ಆಯೋಗವು ನಿತ್ಯದ ತಲಾ ಖರ್ಚನ್ನು ನಗರ ವಾಸಿಗಳಿಗೆ 28.65 ರೂಪಾಯಿ ಹಾಗೂ ಗ್ರಾಮೀಣರಿಗೆ 22.42 ರೂಪಾಯಿ ನಿಗದಿ ಮಾಡಿತ್ತು. ಗ್ರಾಮೀಣ ಪ್ರದೇಶದಲ್ಲಿ ಶೇ 10ರಷ್ಟು ಮಂದಿ ಬಡತನ ರೇಖೆಗಿಂತಲೂ ಕೆಳಗೆ ಜೀವಿಸುತ್ತಿದ್ದಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬರುತ್ತದೆ.

ನಗರ ಪ್ರದೇಶಗಳಲ್ಲಿ ಶೇ 70ರಷ್ಟು ಜನರ ನಿತ್ಯದ ತಲಾ ಖರ್ಚು 43.16 ರೂಪಾಯಿ. ಇನ್ನು ಗ್ರಾಮೀಣ ಪ್ರದೇಶದಲ್ಲಿ ಅರ್ಧದಷ್ಟು ಜನರ ನಿತ್ಯದ ತಲಾ ಖರ್ಚು 43.33 ರೂಪಾಯಿ ಹಾಗೂ ಮಾಸಿಕ ತಲಾ ವೆಚ್ಚ 1,030 ರೂಪಾಯಿಗಿಂತಲೂ ಕಡಿಮೆ ಎಂದು ಸಮೀಕ್ಷೆ ಹೇಳಿದೆ.

7,391 ಗ್ರಾಮಗಳ 59,070 ಮನೆಗಳು ಹಾಗೂ 5,223 ನಗರಗಳ 41,602 ಮನೆಗಳ ಯಾದಿಯನ್ನು ಆಧರಿಸಿ ಎನ್‌ಎಸ್‌ಎಸ್‌ಒ ಈ ಸಮೀಕ್ಷೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.