ADVERTISEMENT

ಶ್ರೀದೇವಿ ಸಾವು: ಅರ್ಜಿ ವಿಚಾರಣೆ ನಿರಾಕರಿಸಿದ ‘ಸುಪ್ರೀಂ’

ಪಿಟಿಐ
Published 11 ಮೇ 2018, 19:30 IST
Last Updated 11 ಮೇ 2018, 19:30 IST
ಶ್ರೀದೇವಿ
ಶ್ರೀದೇವಿ   

ನವದೆಹಲಿ: ಬಾಲಿವುಡ್ ನಟಿ ಶ್ರೀದೇವಿ ‘ನಿಗೂಢ’ ಸಾವಿನ ಕುರಿತು ಸ್ವತಂತ್ರ ತನಿಖೆ ನಡೆಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ತಳ್ಳಿಹಾಕಿದೆ.

‘5 ಅಡಿ 7 ಇಂಚು ಎತ್ತರದ ವ್ಯಕ್ತಿ 5 ಅಡಿ 1 ಇಂಚಿನ ಸ್ನಾನದ ತೊಟ್ಟಿಯಲ್ಲಿ ಮುಳುಗುವುದು ಸಾಧ್ಯವೇ ಇಲ್ಲ. ಇದರಲ್ಲಿ ಏನೋ ನಿಗೂಢ ಇದ್ದು, ತನಿಖೆ ಆಗಲೇಬೇಕು. ಅವರು ಸೆಲಬ್ರಿಟಿ ಆಗಿದ್ದರು. ದುಬೈ ಹೋಟೆಲ್‌ನಲ್ಲಿ ಏನಾಯಿತು ಎಂದು ತಿಳಿಯಲು ದೇಶ ಬಯಸುತ್ತದೆ’ ಎಂದು ಅರ್ಜಿದಾರರಾದ ಉತ್ತರ ಪ್ರದೇಶದ ಸುನಿಲ್ ಸಿಂಗ್ ಪರ ಹಿರಿಯ ವಕೀಲ ವಿಕಾಸ್ ಸಿಂಗ್ ವಾದಿಸಿದರು.

ಹೊಸದಾಗಿ ತನಿಖೆ ನಡೆಸುವಂತೆ ಕೋರಿದ ವಕೀಲ ಸಿಂಗ್, ‘ಶ್ರೀದೇವಿ ಕುಡಿಯುತ್ತಿರಲಿಲ್ಲ. ಅಲ್ಲದೆ ಒಮಾನ್‌ನ ಇನ್ಶೂರೆನ್ಸ್ ಕಂಪನಿಯಲ್ಲಿ ಅವರು ₹250 ಕೋಟಿ ವಿಮೆ ಹೊಂದಿದ್ದರು. ವಿಮೆ ಹೊಂದಿರುವವರು ದುಬೈನಲ್ಲಿ ಮೃತಪಟ್ಟರೆ ಮಾತ್ರ ವಿಮೆಯ ಮೊತ್ತ ನಾಮಿನಿಗೆ ಸಿಗುತ್ತದೆ ಎಂಬ ಷರತ್ತು ಇತ್ತು’ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ADVERTISEMENT

ದುರದೃಷ್ಟಕರ: ವಿಶೇಷ ಸಿಬಿಐ ನ್ಯಾಯಮೂರ್ತಿ ಬಿ.ಎಚ್. ಲೋಯಾ ಸಾವಿನ ಪ್ರಕರಣದೊಂದಿಗೆ ಈ ಪ್ರಕರಣವನ್ನು ಹೋಲಿಸಿದ ವಕೀಲರು, ‘ನ್ಯಾಯಮೂರ್ತಿ ಲೋಯಾ ಪ್ರಕರಣದಲ್ಲಿ ಸಹಜ ಸಾವನ್ನು ನಿಗೂಢ ಎಂದು ಬಿಂಬಿಸಲಾಗಿತ್ತು. ಆದರೆ ಈ ಪ್ರಕರಣದಲ್ಲಿ ನಿಗೂಢ ಸಾವನ್ನು ಸಹಜ ಎಂದು ಬಿಂಬಿಸಲಾಗುತ್ತಿದೆ. ಇದು ದುರದೃಷ್ಟಕರ’ ಎಂದರು.

ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಹಾಗೂ ಡಿ.ವೈ.ಚಂದ್ರಚೂಡ್ ಅವರ ನ್ಯಾಯಪೀಠ ಹೇಳಿತು.

ಶ್ರೀದೇವಿ ಸಾವಿನ ತನಿಖೆ ನಡೆಸುವಂತೆ ಕೋರಿ ಸುನಿಲ್ ಸಿಂಗ್ ಮಾರ್ಚ್ 9ರಂದು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ‍

ಪ್ರಕರಣ ಕುರಿತು ದುಬೈನಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಈ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದ್ದು ಸೂಕ್ತವಲ್ಲ ಎನ್ನುವ ವಕೀಲ ವಿಕಾಸ್ ಸಿಂಗ್ ಅವರ ವಾದವನ್ನು ನ್ಯಾಯಪೀಠ ಒಪ್ಪಿಕೊಳ್ಳಲಿಲ್ಲ.

ಫೆಬ್ರುವರಿ 24ರಂದು ದುಬೈನಲ್ಲಿ ಹೋಟೆಲ್‌ನ ಸ್ನಾನದ ಕೊಠಡಿಯಲ್ಲಿ ಕುಸಿದುಬಿದ್ದು ಶ್ರೀದೇವಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.