ತಿರುಚನಾಪಳ್ಳಿ (ಪಿಟಿಐ): ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದವರ ನೆರವಿಗಾಗಿ ಮುಂಬೈನ ಬಾಬಾ ಅಣು ಶಕ್ತಿ ಸಂಶೋಧನಾ ಕೇಂದ್ರವು (ಬಿಎಆರ್‌ಸಿ) ತುರ್ತು ಸಂದೇಶ ರವಾನಿಸುವ ಸಾಧನವೊಂದನ್ನು ಕಂಡುಹಿಡಿದಿದೆ. ಇದಕ್ಕೆ `ನಿರ್ಭಯ' ಎಂದು ಹೆಸರಿಸಿದೆ.
ಸಂಕಷ್ಟದ ಸಂದರ್ಭದಲ್ಲಿ ಇದರಿಂದ ಹೊರಹೊಮ್ಮುವ ರೇಡಿಯೊ ತರಂಗದ ತುರ್ತು ಸಂದೇಶವು ಪೊಲೀಸರು ಇಲ್ಲವೇ ಸಮೀಪದ ಬಂಧುಗಳಿಗೆ ರವಾನೆಯಾಗುತ್ತದೆ. ಈ ಮೂಲಕ ಸಂಕಷ್ಟಕ್ಕೆ ಸಿಲುಕಿದವರು ಅದರಿಂದ ಪಾರಾಗಬಹುದು ಎಂದು `ಬಿಎಆರ್‌ಸಿ' ಹೇಳಿದೆ.
`ನಿರ್ಭಯ' ಸಾಧನದ ಬಳಕೆಗೆ `ಬ್ಲೂಟೂತ್' ತಂತ್ರಜ್ಞಾನವಿರುವ ಮೊಬೈಲ್ ಫೋನ್ ಹೊಂದಿರುವುದು ಅವಶ್ಯಕ. ಈ ಸಾಧನವು ಸಿಮ್ ಕಾರ್ಡ್‌ಗಳಿಗೆ ಸಂಪರ್ಕ ಹೊಂದಿರುತ್ತದೆ. ಸಂಕಷ್ಟದ ಸನ್ನಿವೇಶದಲ್ಲಿ ಈ ಸಾಧನದ ತುರ್ತು ಸಂದೇಶ ರವಾನಿಸುವ ಗುಂಡಿ (ಬಟನ್) ಒತ್ತಿದರೆ ಸಾಕು ನೆರವಿನ ಕೋರಿಕೆಯ `ಎಸ್‌ಎಂಎಸ್' ಆ ಕ್ಷಣದಲ್ಲಿ ರವಾನೆಯಾಗುತ್ತದೆ. ಮಾತ್ರವಲ್ಲದೆ, ನೆರವು ಯಾಚಿಸುತ್ತಿರುವ ವ್ಯಕ್ತಿ ಇರುವ ಸ್ಥಳದ ವಿವರವನ್ನೂ `ಜಿಪಿಎಸ್' ತಂತ್ರಜ್ಞಾನದ ಮೂಲಕ ತಿಳಿಸುತ್ತದೆ.
ಈ ಸಾಧನದ ತಂತ್ರಾಂಶವನ್ನು ಸಿಮ್ ಕಾರ್ಡ್‌ಗೆ ಮೊದಲು ಅಳವಡಿಸಿಕೊಳ್ಳಬೇಕು. ಅದರಲ್ಲಿ ಮೊದಲೇ ಸಿದ್ಧ ಪಡಿಸಿದ `ಎಸ್‌ಎಂಎಸ್'ಗಳು ಇರುತ್ತವೆ. ತುರ್ತು ಸಂದರ್ಭದಲ್ಲಿ ಈ ಸಂದೇಶಗಳು ಯಾರಿಗೆ ರವಾನೆಯಾಗಬೇಕಿದೆಯೋ ಅಂತಹವರ ಮೊಬೈಲ್ ಸಂಖ್ಯೆಗಳನ್ನು (ಐದು ಮೊಬೈಲ್ ಸಂಖ್ಯೆಗಳು) ನಮೂದಿಸಿಕೊಂಡಿದ್ದರೆ, ತುರ್ತು ಸಂದೇಶ ರವಾನಿಸುವ ಬಟನ್ ಒತ್ತಿದಾಗ `ಎಸ್‌ಎಂಎಸ್' ಆಯಾ ಮೊಬೈಲ್‌ಗಳಿಗೆ ರವಾನೆಯಾಗುತ್ತದೆ ಎಂದು `ಬಿಎಆರ್‌ಸಿ' ಪ್ರಕಟಣೆ ತಿಳಿಸಿದೆ.
ದುಬಾರಿಯಲ್ಲದ ಈ ಸಾಧನವನ್ನು ಪರ್ಸ್ ಇಲ್ಲವೇ ಜೇಬಿನಲ್ಲಿ ಇರಿಸಿಕೊಳ್ಳಬಹುದು. ಅಪಹರಣ, ದಾಳಿ, ದರೋಡೆ, ಹೃದಯಾಘಾತ ಇನ್ನಿತರ ತುರ್ತು ಸನ್ನಿವೇಶದಲ್ಲಿ ಇದು ಅಗತ್ಯ ನೆರವನ್ನು ಕಲ್ಪಿಸಲು ಸಹಕಾರಿ. ಸುಲಭವಾಗಿ ದುರ್ಬಲಗೊಳಿಸಲಾಗದ ಇಲ್ಲವೇ ನಾಶ ಮಾಡಲು ಸಾಧ್ಯವಿಲ್ಲದ ಈ ಸಾಧನವು ಮಹಿಳೆಯರಿಗೆ ಹೆಚ್ಚು ಉಪಕಾರಿ. ನವದೆಹಲಿಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೀಡಾಗಿ ಸಾವನ್ನಪ್ಪಿದ್ದ ಯುವತಿ `ನಿರ್ಭಯ'ಳ (ನಿಜವಾದ ಹೆಸರಲ್ಲ)ಹೆಸರನ್ನೇ ಇದಕ್ಕೆ ಇರಿಸಲಾಗಿದೆ ಎಂದು ಪ್ರಕಟಣೆ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.