ದೇಶಮುಖ್ ರಾಜೀನಾಮೆಗೆ ಬಿಜೆಪಿ ಆಗ್ರಹ
ನವದೆಹಲಿ (ಪಿಟಿಐ): ಸಿನಿಮಾ ನಿರ್ದೇಶಕ ಸುಭಾಷ್ ಘಾಯ್ ಅವರಿಗೆ ಫಿಲ್ಮಂ ಅಕಾಡೆಮಿ ಸ್ಥಾಪನೆಗಾಗಿ ಮುಂಬೈ ಸಮೀಪ ಭೂಮಿ ನೀಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ವಿಲಾಸ್‌ರಾವ್ ದೇಶಮುಖ್ ರಾಜೀನಾಮೆ ಸಲ್ಲಿಸಬೇಕು ಇಲ್ಲವೇ ಅವರನ್ನು ಪ್ರಧಾನಿ ವಜಾಗೊಳಿಸಬೇಕು ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಗುರುವಾರ ಒತ್ತಾಯಿಸಿದ್ದಾರೆ.
ಅಸ್ಸಾಂ ಗಡಿಯಲ್ಲಿ ನಾಲ್ವರು ಪ್ರತ್ಯೇಕತಾವಾದಿಗಳ ಹತ್ಯೆ
ಗುವಾಹಟಿ (ಐಎಎನ್‌ಎಸ್): ಭದ್ರತಾ ಪಡೆ ಮತ್ತು `ಜರೊ ರಾಷ್ಟ್ರೀಯ ಪ್ರತ್ಯೇಕತಾವಾದಿ ಸೇನೆ~ (ಜಿಎನ್‌ಎಲ್‌ಎ) ನಡುವೆ ಅಸ್ಸಾಂ- ಮೇಘಾಲಯ ಗಡಿ ಭಾಗದಲ್ಲಿ ಗುರುವಾರ ಮುಂಜಾನೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ಪ್ರತ್ಯೇಕತಾವಾದಿಗಳು ಹತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
`ಜಿಎನ್‌ಎಲ್‌ಎ ಸಂಘಟನೆಯ 15 ಬಂಡುಕೋರರು ಮೊಂಗ್‌ಪಾಂಗ್ರೊ ಗ್ರಾಮದಲ್ಲಿ ಅವಿತುಕೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಾವು ಬುಧವಾರ ರಾತ್ರಿಯೇ ಕಾರ್ಯಾಚರಣೆಗೆ ಇಳಿದೆವು. ಗುಂಡಿನ ಚಕಮಕಿಯಲ್ಲಿ ನಾಲ್ವರು ಪ್ರತ್ಯೇಕತಾವಾದಿಗಳು ಹತರಾಗಿದ್ದು, ಉಳಿದವರು ತಪ್ಪಿಸಿಕೊಂಡರು~ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಚಳವಳಿ ಸೇರಲು ವಿ.ಕೆ. ಸಿಂಗ್‌ಗೆ ಬಾಬಾ ಕರೆ
ಪಟ್ನಾ(ಐಎಎನ್‌ಎಸ್): ನಿವೃತ್ತಿ ನಂತರ ತಮ್ಮ ಭ್ರಷ್ಟಾಚಾರ ವಿರೋಧಿ ಚಳವಳಿಗೆ ಸೇರಿಕೊಳ್ಳುವಂತೆ ಯೋಗ ಗುರು ಬಾಬಾ ರಾಮದೇವ್ ಭಾರತೀಯ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರಿಗೆ ಗುರುವಾರ ಆಮಂತ್ರಣ ನೀಡಿದ್ದಾರೆ.
ತಮ್ಮದೇ ಕಂಪೆನಿಯಲ್ಲಿ ತಯಾರಾಗುವ ಆಯುರ್ವೇದ ಉತ್ಪನ್ನಗಳಿಗಿರುವ ಗ್ರಾಹಕರ ಪ್ರಮಾಣ ಕುರಿತಾದ ಪಟ್ಟಿ ಬಿಡುಗಡೆ ಸಮಾರಂಭಕ್ಕೂ ಮುಂಚೆ ಸುದ್ದಿಗಾರಿಗೆ ಈ ವಿಷಯ ತಿಳಿಸಿರುವ ಬಾಬಾ, ಹೆಚ್ಚೆಚ್ಚು ಜನ ಸೇರ್ಪಡೆಗೊಂಡಂತೆ ಭ್ರಷ್ಟಾಚಾರ ವಿರೋಧಿ ಹಾಗೂ ಕಪ್ಪು ಹಣ ಕುರಿತಾದ ಚಳವಳಿಗೆ ಬಲ ಬರುತ್ತದೆ ಎಂದು ಹೇಳಿದ್ದಾರೆ.
ಅಲ್ಲದೆ ಇತ್ತೀಚಿನ ಕೆಲವು ವಿವಾದಗಳಿಂದ ಉಂಟಾಗಿರುವ ಮಾನಸಿಕ ಒತ್ತಡಗಳನ್ನು ಪರಿಹರಿಸಿಕೊಳ್ಳಲು ಯೋಗ ಕೇಂದ್ರವನ್ನು ಉಪಯೋಗಿಸಿಕೊಳ್ಳುವಂತೆ ಸಿಂಗ್ ಅವರಿಗೆ ಬಾಬಾ ಕರೆ ನೀಡಿದ್ದಾರೆ.
ಬಿಎಸ್‌ಎಫ್‌ನಲ್ಲಿ ಮಾನವ ಹಕ್ಕು ವಿಭಾಗ
ಶ್ರೀನಗರ (ಪಿಟಿಐ): ಗಡಿ ಭದ್ರತಾ ಪಡೆಯು (ಬಿಎಸ್‌ಎಫ್) ಕಾಶ್ಮೀರ ಕಣಿವೆಯಲ್ಲಿ ಮಾನವ ಹಕ್ಕು ಘಟಕವನ್ನು ಪ್ರಾರಂಭಿಸಿದೆ.
ಬಿಎಸ್‌ಎಫ್ ಸಿಬ್ಬಂದಿಗಳನ್ನು ಮಾನವ ಹಕ್ಕುಗಳ ಬಗ್ಗೆ ಸೂಕ್ಷ್ಮ ಗ್ರಾಹಿಗಳಾಗಿಸುವುದು ಹಾಗೂ ಉಲ್ಲಂಘನೆ ವಿರುದ್ಧ ದನಿಯೆತ್ತುವುದು ಮುಂತಾದವು ಘಟಕದ ಉದ್ದೇಶವಾಗಿದೆ ಎಂದು ಬಿಎಸ್‌ಎಫ್ ವಕ್ತಾರರು ತಿಳಿಸಿದ್ದಾರೆ.
ಮಾನವ ಹಕ್ಕು ಉಲ್ಲಂಘನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ಹಾಗೂ ರಾಷ್ಟ್ರೀಯ ಮಾನವ ಹಕ್ಕು ಆಯೋಗ ನಿರ್ದೇಶಿಸಿರುವ ಪ್ರಕರಣಗಳ ಬಗ್ಗೆಯೂ ಈ ವಿಭಾಗ ಗಮನಹರಿಸಲಿದೆ ಎಂದು ಅವರು ಹೇಳಿದ್ದಾರೆ.
ವೇತನ ಬಾಕಿ: ಏರ್ ಇಂಡಿಯಾ ಸಿಬ್ಬಂದಿ ಗೈರು
ಮುಂಬೈ (ಪಿಟಿಐ): ಎರಡು ತಿಂಗಳಿಂದ ವೇತನ ಪಾವತಿ ಆಗದಿರುವುದನ್ನು ಪ್ರತಿಭಟಿಸಿ ಏರ್ ಇಂಡಿಯಾ ವಿಮಾನ ಸಂಸ್ಥೆಯ ಕೆಲವು ಸಿಬ್ಬಂದಿ ಗುರುವಾರ ಕೆಲಸಕ್ಕೆ ಗೈರುಹಾಜರಾಗಿದ್ದರಿಂದ ಇಲ್ಲಿಂದ ಹೊರಡಬೇಕಿದ್ದ ಎರಡು ಅಂತರರಾಷ್ಟ್ರೀಯ ವಿಮಾನಗಳು ತಡವಾಗಿ ಹೊರಡಬೇಕಾಯಿತು.
ಪ್ರಯಾಣಿಕರ ಸಾಮಾನು ಸರಂಜಾಮುಗಳ ಸಾಗಣೆ, ವಿಮಾನಗಳ ಸ್ವಚ್ಛಗೊಳಿಸುವಿಕೆ, ವಿಮಾನಕ್ಕೆ ಇಂಧನ ತುಂಬುವಿಕೆ ಇನ್ನಿತರ ಕೆಲಸಗಳನ್ನು ನಿರ್ವಹಿಸುವ ಸುಮಾರು 100 ಗುತ್ತಿಗೆ ಆಧಾರಿತ ಸಿಬ್ಬಂದಿ ಕೆಲಸಕ್ಕೆ ಹಾಜರಾಗಲಿಲ್ಲ. `ಸಿಬ್ಬಂದಿಯ ವೇತನ ಪಾವತಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.
ಶುಕ್ರವಾರ ಬ್ಯಾಂಕ್ ರಜೆಯಿರುವುದರಿಂದ ಅವರಿಗೆ ಶನಿವಾರ ವೇತನ ಸಿಗಲಿದೆ. ಇದನ್ನು ತಿಳಿದು ಒಂದಷ್ಟು ಸಿಬ್ಬಂದಿ ಈಗಾಗಲೇ ಕೆಲಸಕ್ಕೆ ಮರಳಿದ್ದಾರೆ ಎಂದು~ ಕಂಪೆನಿಯ ವಕ್ತಾರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.