ADVERTISEMENT

ಸಂಜೋತಾ: ತನಿಖೆ ಪ್ರಗತಿಯಲ್ಲಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 19:00 IST
Last Updated 30 ಮಾರ್ಚ್ 2011, 19:00 IST
ಸಂಜೋತಾ: ತನಿಖೆ ಪ್ರಗತಿಯಲ್ಲಿ
ಸಂಜೋತಾ: ತನಿಖೆ ಪ್ರಗತಿಯಲ್ಲಿ   

ನವದೆಹಲಿ (ಪಿಟಿಐ): ಹಲವು ಪಾಕಿಸ್ತಾನಿಯರ ಸಾವಿಗೆ ಕಾರಣವಾದ ಸಂಜೋತಾ ಎಕ್ಸ್‌ಪ್ರೆಸ್ ರೈಲು ಸ್ಫೋಟ ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಎಲ್ಲ ತಪ್ಪಿತಸ್ಥರನ್ನು ಪತ್ತೆ ಹಚ್ಚುವ ತನಕ ತನಿಖೆ ಮುಂದುವರಿಯಲಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಇಲ್ಲಿ ತಿಳಿಸಿದೆ.

ಸೋಮವಾರ ಮತ್ತು ಮಂಗಳವಾರ ನಡೆದ ಭಾರತ-ಪಾಕ್ ಗೃಹ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯಲ್ಲಿ 2007ರಲ್ಲಿ ನಡೆದ ಈ ಪ್ರಕರಣದ ತನಿಖಾ ಪ್ರಗತಿಯನ್ನು ಪಾಕ್ ತಿಳಿಯಬಯಸಿದ ಹಿನ್ನೆಲೆಯಲ್ಲಿ ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ತನಿಖೆ ನಡೆಸುತ್ತಿರುವುದಾಗಿ ಕೇಂದ್ರ ಗೃಹ ಸಚಿವಾಲಯ ಹೇಳಿಕೆಯೊಂದರಲ್ಲಿ ಸ್ಪಷ್ಟಪಡಿಸಿದೆ.

ತನಿಖಾಧಿಕಾರಿಗಳು ಹಲವು ರಾಜ್ಯಗಳ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಶಂಕಿತರನ್ನು ಪ್ರಶ್ನಿಸಿದ್ದು, ವಿಧಿವಿಜ್ಞಾನ ಸಂಸ್ಥೆ ಮತ್ತು ರೈಲ್ವೆ ಇಲಾಖೆಯ ಪರಿಣತರ ನೆರವನ್ನು ತನಿಖೆಯಲ್ಲಿ ಪಡೆದಿರುವುದಾಗಿ ಅದು ಹೇಳಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಈಗ ಜೈಲಿನಲ್ಲಿರುವ ಬಲಪಂಥೀಯ ಕಾರ್ಯಕರ್ತ ಸ್ವಾಮಿ ಅಸೀಮಾನಂದ ತಪ್ಪೊಪ್ಪಿಕೊಂಡಿದ್ದು, ಜೊತೆಗೆ ಇತರ ಆರೋಪಿಗಳ ಹೆಸರನ್ನೂ ತನಿಖಾಧಿಕಾರಿಗಳಿಗೆ ತಿಳಿಸಿರುವುದಾಗಿ ಅದು ನುಡಿದಿದೆ.

ಬಾಂಬ್‌ನಲ್ಲಿ ಕಡಿಮೆ ತೀವ್ರತೆಯ ಸ್ಫೋಟಕ ಸಾಮಗ್ರಿಗಳನ್ನು ಬಳಸಿದ್ದು, ಆದರೆ ಇವುಗಳನ್ನು ಬೆಂಕಿ ಹೊತ್ತಿಸುವ ಇಂಧನ ತುಂಬಿದ ಕಚ್ಚಾ ಬಾಟಲ್‌ಗಳ ಜೊತೆ ಸುಧಾರಿತ ಮಾದರಿಯಲ್ಲಿ ಸೂಟ್‌ಕೇಸ್‌ಗಳಲ್ಲಿಟ್ಟು ಸ್ಫೋಟಿಸಲಾಗಿದೆ. ಬಾಂಬ್ ವಿನ್ಯಾಸವು ಮೂರು ಬೋಗಿಗಳಲ್ಲಿ ಬೆಂಕಿ ಹೊತ್ತಿ ಉರಿಯಲು ಕಾರಣವಾಗಿ ರೈಲಿಗೆ ಅಪಾರ ಹಾನಿಯುಂಟು ಮಾಡಿರುವುದನ್ನು ವಿಧಿವಿಜ್ಞಾನ ತನಿಖಾಧಿಕಾರಿಗಳು ದೃಢಪಡಿಸಿದ್ದಾರೆ ಎಂದು ಅದು ವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.