ADVERTISEMENT

ಸಂಜೌತಾ ಸ್ಫೋಟ: ಅಸೀಮಾನಂದ, ಇತರರ ವಿರುದ್ಧ ದೋಷಾರೋಪ

​ಪ್ರಜಾವಾಣಿ ವಾರ್ತೆ
Published 20 ಜೂನ್ 2011, 11:20 IST
Last Updated 20 ಜೂನ್ 2011, 11:20 IST

ಪಂಚಕುಲ (ಹರಿಯಾಣ) (ಪಿಟಿಐ): ನಾಲ್ಕು ವರ್ಷಗಳ ಸುದೀರ್ಘ ತನಿಖೆಯ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಸೋಮವಾರ ಶಂಕಿತ ಬಲಪಂಥೀಯ ಉಗ್ರಗಾಮಿ ಅಸೀಮಾನಂದ ಮತ್ತು ಇತರ ನಾಲ್ವರ ವಿರುದ್ಧ, 2007ರಲ್ಲಿ 68 ಜನರ ಸಾವಿಗೆ ಕಾರಣವಾದ ಸಂಜೌತಾ ಎಕ್ಸ್ ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತು.

ಸಂಸ್ಥೆಯು ಪ್ರಕರಣದಲ್ಲಿ ಹಿಂದು ಕಾರ್ಯಕರ್ತೆ ಸಾಧ್ವಿ ಪ್ರಗ್ಯಾ ಥಾಕೂರ್ ಬಗೆಗೂ ತನಿಖೆ ನಡೆಸುತ್ತಿದ್ದು, ಆಕೆಯನ್ನೂ ಬಂಧಿಸಬಹುದು ಎಂದು ಹೇಳಲಾಗುತ್ತಿದೆ.

ಅಡಿಷನಲ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ರಜಾಕಾಲೀನ ನ್ಯಾಯಾಧೀಶ ಕಂಚನ್ ಮಹಿ ಮುಂದೆ ಸಲ್ಲಿಸಲಾದ ದೋಷಾರೋಪ ಪಟ್ಟಿಯಲ್ಲಿ ಸಂಸ್ಥೆಯು ಅಸೀಮಾನಂದ, ಸುನಿಲ್ ಜೋಷಿ (ಈಗ ಮೃತರಾಗಿದ್ದಾರೆ), ಲೋಕೇಶ ಶರ್ಮಾ, ಸಂದೀಪ ಡಾಂಗೆ ಮತ್ತು ರಾಮಚಂದ್ರ ಕಲಸಂಗ್ರಾ ಯಾನೆ ರಾಮ್ ಜಿ ಅವರ ವಿರುದ್ಧ ಕ್ರಿಮಿನಲ್ ಸಂಚು ರೂಪಿಸಿದ ಆರೋಪವನ್ನು ಹೊರಿಸಿದೆ. ಈ ಒಳಸಂಚಿನ ಪರಿಣಾಮವಾಗಿ 2007ರ ಫೆಬ್ರುವರಿ 18ರಂದು ಪಾಣಿಪತ್ ಬಳಿ ರೈಲಿನಲ್ಲಿ ಸ್ಫೋಟಗಳು ಸಂಭವಿಸಿದವು ಎಂದು ದೋಷಾರೋಪ ಪಟ್ಟಿ ಹೇಳಿದೆ.

ಈ ಬಾಂಬ್ ಸ್ಫೋಟಗಳಲ್ಲಿ ಮೃತರಾದ ಹೆಚ್ಚಿನ ಮಂದಿ ಪಾಕಿಸ್ತಾನೀಯರು.

ರಾಮಚಂದ್ರ ಕಲಸಂಗ್ರ ಮತ್ತು ಸಂದೀಪ ಡಾಂಗೆ ಅವರನ್ನು ಪ್ರಕರಣದಲ್ಲಿ ಘೋಷಿತ ಅಪರಾಧಿಗಳು ಎಂಬುದಾಗಿ ಹೇಳಲಾಗಿದೆ. ಅಸೀಮಾನಂದ ಮತ್ತು ಶರ್ಮಾ ಅವರು ಅಂಬಾಲಾ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಅಸೀಮಾನಂದ ಅವರು ಗುಜರಾತಿನ ಅಕ್ಷರಧಾಮ ದೇವಾಲಯಗಳು, ಜಮ್ಮವಿನ ರಘುನಾಥ ದೇವಾಲಯ ಮತ್ತು ವಾರಣಾಸಿಯ ಸಂಕಟಮೋಚನ ದೇವಾಲಯದ ಮೇಲಿನ ಜೆಹಾದಿ /ಭಯೋತ್ಪಾದಕ ದಾಳಿಗಳಿಂದ ಕ್ಷೋಭೆಗೊಳಗಾಗಿದ್ದರು. ಸುನಿಲ್ ಜೋಷಿ ಮತ್ತು ನಿಕಟವರ್ತಿಗಳ ಜೊತೆ ಚರ್ಚಿಸುವಾಗ ಅವರು ತಮ್ಮ ಭಾವನೆಗಳನ್ನು ಹೊರಗೆಡಹುತ್ತಿದ್ದರು.

ಕಾಲಾಂತರದಲ್ಲಿ ದುರದೃಷ್ಟಕರವಾಗಿ ಜೆಹಾದಿ ಭಯೋತ್ಪಾದಕರ ವಿರುದ್ಧ ಮಾತ್ರವಷ್ಟೇ ಅಲ್ಲ, ಸಂಪೂರ್ಣ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ಆಳವಾದ ಸೇಡಿನ ಮನೋಭಾವ ಬೆಳೆಸಿಕೊಂಡರು.

ಪರಿಣಾಮವಾಗಿ ಅಸೀಮಾನಂದ ಅವರು ~ಬಾಂಬ್ ಬದಲಿಗೆ ಬಾಂಬ್~ (ಬಾಂಬ್ ಕಾ ಬದ್ಲಾ ಬಾಂಬ್) ಎಂಬ ಸಿದ್ಧಾಂತವನ್ನು ಹುಟ್ಟು ಹಾಕಿದರು. ಸಂಜೌತಾ ರೈಲ್ ನಲ್ಲಿ ಪ್ರಯಾಣಿಸುವ ಬಹುತೇಕ ಮಂದಿ ಪಾಕಿಸ್ತಾನೀಯರಾದ ಕಾರಣ ಅದನ್ನು ದಾಳಿಗೆ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಎನ್ಐಎ ಹೇಳಿದೆ.

ಈ ಕೃತ್ಯವನ್ನು ಜಾರಿಗೊಳಿಸಿದ ತಂಡಕ್ಕೆ ಅಸೀಮಾನಂದ ಅವರು ಹಣಕಾಸು ಹಾಗೂ ಸೈದ್ಧಾಂತಿಕ ಬೆಂಬಲವನ್ನು ನೀಡಿದರು ಎಂದೂ ಎನ್ ಐ ಎ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.