ADVERTISEMENT

ಸಂತ್ರಸ್ತೆಯ ತಂದೆ ಜೈಲಲ್ಲಿ ಸಾವು

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 19:30 IST
Last Updated 9 ಏಪ್ರಿಲ್ 2018, 19:30 IST

ಉನ್ನಾವ್ (ಉತ್ತರ ಪ್ರದೇಶ): ಬಿಜೆಪಿ ಶಾಸಕ ಕುಲದೀಪ್ ಸೆಂಗರ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ 18 ವರ್ಷದ ಯುವತಿಯ ತಂದೆ ಪಪ್ಪು ಸಿಂಗ್ (50) ನ್ಯಾಯಾಂಗ ವಶದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ.

ಇದರಿಂದಾಗಿ ರಾಜ್ಯ ಬಿಜೆಪಿ ಸರ್ಕಾರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೇ ವೇಳೆ ಪ್ರಕರಣದ ಸಂಪೂರ್ಣ ತನಿಖೆ ನಡೆಸಿ ವರದಿ ನೀಡುವಂತೆ ಲಖನೌನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೂಚಿಸಿದ್ದಾರೆ.

ಜಿಲ್ಲಾ ಕಾರಾಗೃಹದಲ್ಲಿದ್ದ‍ ಪಪ್ಪು ಸಿಂಗ್ ಅವರನ್ನು ಭಾನುವಾರ ರಾತ್ರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಸೋಮವಾರ ಅವರು ಸಾವನ್ನಪ್ಪಿದ್ದಾರೆ.

ADVERTISEMENT

ನಾಲ್ವರ ಬಂಧನ: ‘ಎಫ್‌ಐಆರ್‌ನಲ್ಲಿ ಉಲ್ಲೇಖವಾಗಿದ್ದ ಮೂವರನ್ನು ಬಂಧಿಸಲಾಗಿದೆ. ನಿರ್ಲಕ್ಷ್ಯದ ಆರೋಪದಲ್ಲಿ ಆರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ನ್ಯಾಯಾಂಗ ತನಿಖೆಗೆ ಆದೇಶ: ಪ್ರಕರಣ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.

**

‘ಹತ್ಯೆಗೆ ಶಾಸಕರ ಸೂಚನೆ’

‘ನಮಗೆ ಬೆದರಿಕೆಗಳು ಬರುತ್ತಿದ್ದವು. ಶಾಸಕರ ಸೂಚನೆ ಮೇರೆಗೆ ಜೈಲಿನೊಳಗೆ ನನ್ನ ತಂದೆಯನ್ನು ಹತ್ಯೆ ಮಾಡಲಾಗಿದೆ’ ಎಂದು ತಂದೆಯ ಸಾವಿನ ಬಳಿಕ ಯುವತಿ ಆರೋಪಿಸಿದ್ದಾರೆ.

**

ನ್ಯಾಯಾಂಗ ತನಿಖೆಗೆ ಆದೇಶ

ಪ್ರಕರಣ ಕುರಿತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಸರ್ಕಾರದ ವಕ್ತಾರ ಶ್ರೀಕಾಂತ್ ಶರ್ಮಾ ತಿಳಿಸಿದ್ದಾರೆ.

‘ಆರೋಪ ನಿಜವಾಗಿದ್ದರೆ ಇದು ದುರದೃಷ್ಟಕರ ಘಟನೆ. ನ್ಯಾಯಯುತ ತನಿಖೆ ನಡೆಯಲಿ ಎನ್ನುವ ಉದ್ದೇಶದಿಂದ, ವಿಚಾರಣೆಯನ್ನು ಉನ್ನಾವ್‌ದಿಂದ ಲಖನೌಗೆ ವರ್ಗಾಯಿಸಲಾಗಿದೆ. ಸಂತ್ರಸ್ತೆ ಕುಟುಂಬಕ್ಕೆ ನ್ಯಾಯ ಕೊಡಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಶರ್ಮಾ ಹೇಳಿದ್ದಾರೆ.

**

ಘಟನೆ ದುರದೃಷ್ಟಕರ. ಪೊಲೀಸರು ಅಥವಾ ಯಾರೇ ತಪ್ಪಿತಸ್ಥರಾಗಿದ್ದರೂ ಸಹಿಸುವುದಿಲ್ಲ. ಕ್ರಮ ಕೈಗೊಳ್ಳಲಾಗುತ್ತದೆ
–ಯೋಗಿ ಆದಿತ್ಯನಾಥ, ಉತ್ತರ ಪ್ರದೇಶ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.