ADVERTISEMENT

ಸಂಸದರ ಕೆಂಪುದೀಪದ ಕಾರಿಗೆ ಸೋನಿಯಾ ತಡೆ

​ಪ್ರಜಾವಾಣಿ ವಾರ್ತೆ
Published 23 ಮೇ 2012, 19:30 IST
Last Updated 23 ಮೇ 2012, 19:30 IST

ನವದೆಹಲಿ: ಅಧಿಕಾರದ ಗತ್ತು-ಗೈರತ್ತಿನ ಸಂಕೇತವಾದ ಕೆಂಪು ದೀಪಗಳನ್ನು ಸಂಸದರು ತಮ್ಮ ಕಾರುಗಳ ಮೇಲೆ ಅಳವಡಿಸಿಕೊಳ್ಳುವ  ಪ್ರಸ್ತಾಪಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ `ಕೆಂಪು ದೀಪ~ (ರೆಡ್ ಸಿಗ್ನಲ್) ತೋರಿದ್ದಾರೆ.

ಸಂಸದರು ಕಾರುಗಳ ಮೇಲೆ `ಕೆಂಪು ದೀಪ~ಗಳನ್ನು ಹಾಕಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಆದೇಶ ಹೊರಡಿಸಲು ಸಿದ್ಧತೆ ನಡೆಸಿರುವ ಬೆನ್ನಲ್ಲೇ ಸೋನಿಯಾ ಅದಕ್ಕೆ ತಡೆ ಒಡ್ಡಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಕಾರ್ಯಕಾರಿಣಿಯಲ್ಲಿ ಸೋನಿಯಾ, ಸಂಸದರ ಕಾರುಗಳ ಮೇಲೆ ಕೆಂಪು ದೀಪಗಳನ್ನು ಹಾಕಿಕೊಳ್ಳಲು ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜಧಾನಿಯಲ್ಲಿ ಹೆಚ್ಚು ಕೆಂಪು ದೀಪದ ಕಾರುಗಳು ತಿರುಗಾಡುವುದರಿಂದ ಸಮಸ್ಯೆ ಸೃಷ್ಟಿಯಾಗಲಿದೆ. ರಾಜ್ಯಗಳಲ್ಲಿ ಕೆಂಪು ದೀಪಗಳಿಗೆ ಅನುಮತಿ ನೀಡುವುದು ಆಯಾ ಸರ್ಕಾರಗಳಿಗೆ ಬಿಟ್ಟ ವಿಚಾರ ಎಂದು ಸೋನಿಯಾ ಹೇಳಿದರು.

ನೀತಿ-ಸಂಹಿತೆ ಮೇಲಿನ ಸಂಸದೀಯ ಸಮಿತಿ ಡಿಸೆಂಬರ್‌ನಲ್ಲಿ ಸದನದಲ್ಲಿ ಮಂಡಿಸಿದ ವರದಿಯು ಎಂಪಿಗಳಿಗೆ ಈ ಸೌಲಭ್ಯ ಒದಗಿಸುವ ಕುರಿತು ಪ್ರಸ್ತಾಪಿಸಿದೆ. ಕಳೆದ ವಾರ ಸಂಸತ್ತಿನಲ್ಲಿ ನಡೆದ ಚರ್ಚೆಯ ಸಮಯದಲ್ಲಿ ಸಂಸದರು ಪಕ್ಷಾತೀತವಾಗಿ ಕೆಂಪು ದೀಪ ಬಳಕೆಗೆ ಅವಕಾಶ ನೀಡಬೇಕೆಂದು ಆಗ್ರಹ ಮಾಡಿದರು.

ಸಮಿತಿ ಶಿಫಾರಸ್ಸು ಮಾಡಿದ್ದರೂ ಸರ್ಕಾರ ಏಕೆ ಈ ವಿಷಯದಲ್ಲಿ ವಿಳಂಬ ಮಾಡುತ್ತಿದೆ ಎಂದು ಕೇಳಿದ್ದರು.  ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದ ಹಿರಿಯ ಸದಸ್ಯ ಪಿ.ಸಿ. ಚಾಕೋ ಈ ವಿಷಯ ಪ್ರಸ್ತಾಪಿಸಿ, ಪಕ್ಷದ ನಿಲುವನ್ನು ತಿಳಿಯಬಯಸಿದರು. ರಾಜ್ಯಗಳಲ್ಲಿ ಶಾಸಕರು ಕಾರುಗಳ ಮೇಲೆ ಕೆಂಪು ದೀಪಗಳನ್ನು ಹಾಕಿಕೊಂಡು ಓಡಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷರ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ, ಚಾಕೋ ವಾದವನ್ನು ಸೋನಿಯಾ ಮಾನ್ಯ ಮಾಡಲಿಲ್ಲ ಎಂದು  ಮೂಲಗಳು ತಿಳಿಸಿವೆ.

ಕೆಂಪು ದೀಪಗಳ ಬಳಕೆ ಬಹು ದಿನಗಳ ಬೇಡಿಕೆಯಾಗಿದ್ದು, ಈ ಸೌಲಭ್ಯಕ್ಕಾಗಿ ಪಟ್ಟು ಹಿಡಿದಿರುವ ಸಂಸದರು, `ರಾಜ್ಯಗಳಲ್ಲಿ ಶಾಸಕರು ಅಷ್ಟೇ ಅಲ್ಲ, ಪಂಚಾಯತ್ ಸದಸ್ಯರೂ ಬಳಸುತ್ತಿದ್ದಾರೆ ಎಂದು ಪ್ರತಿಪಾದಿಸುತ್ತಿದ್ದಾರೆ. ಆದರೆ, ಕೆಲವೇ ಮಂದಿ ಸಂಸದರು ಕೆಂಪು ದೀಪಗಳ ಬಳಕೆಗೆ ಅವಕಾಶ ಇರಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.