ADVERTISEMENT

ಸಂಸದರ ಭತ್ಯೆ ಭಾರಿ ಏರಿಕೆ: ಸಂಪುಟ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:51 IST
Last Updated 28 ಫೆಬ್ರುವರಿ 2018, 19:51 IST

ನವದೆಹಲಿ: ಸಂಸದರು ಪಡೆಯುವ ವಿವಿಧ ಭತ್ಯೆಗಳು ಏಪ್ರಿಲ್‌ನಿಂದ ಗಣನೀಯ ಏರಿಕೆ ಕಾಣಲಿವೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಕ್ಷೇತ್ರ ಭತ್ಯೆ, ಕಚೇರಿ ಭತ್ಯೆಗಳೆಲ್ಲವೂ ಗಣನೀಯವಾಗಿ ಏರಿಕೆಯಾಗಿವೆ. ಈ ಹೆಚ್ಚಳದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ₹39.22 ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.

ಸಂಸದರ ಮನೆಗೆ ಈಗ ಬ್ರಾಡ್‌ಬ್ಯಾಂಡ್‌ ಸಂಪರ್ಕ ಇದೆ. ಇನ್ನು ಮುಂದೆ ಅದರ ಜತೆಗೆ ಹೈಸ್ಪೀಡ್‌ ವೈಫೈ ಸೌಲಭ್ಯವೂ ದೊರೆಯಲಿದೆ.

ಸಂಸದರ ವೇತನವು ಪ್ರತಿ ಐದು ವರ್ಷಗಳಿಗೊಮ್ಮೆ ಪರಿಷ್ಕರಣೆಗೊಳ್ಳಲಿದೆ ಎಂದು ಬಜೆಟ್‌ ಭಾಷಣದಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದರು. ಈ ಪರಿಷ್ಕರಣೆಯೂ ಹಣದುಬ್ಬರದ ಆಧಾರದಲ್ಲಿ ನಡೆಯಲಿದೆ. ಹಾಗಾಗಿ, ಏಪ್ರಿಲ್‌ 1ರಿಂದ ಸಂಬಳ ದುಪ್ಪಟ್ಟಾಗಿ ₹1 ಲಕ್ಷಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ.

ADVERTISEMENT

ಸೇವಾ ವಲಯಕ್ಕೆ ₹5 ಸಾವಿರ ಕೋಟಿ

ಹನ್ನೆರಡು ಪ್ರಮುಖ ಸೇವಾ ಕ್ಷೇತ್ರಗಳಿಗೆ ಉತ್ತೇಜನ ನೀಡಲು ₹5,000 ಕೋಟಿಯ ವಿಶೇಷ ನಿಧಿ ಸ್ಥಾಪನೆಗೆ ಕೇಂದ್ರ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಪ್ರೇರಿತ ಸೇವೆಗಳು, ಪ್ರವಾಸೋದ್ಯಮ ಮತ್ತು ಆತಿಥ್ಯ, ವೈದ್ಯಕೀಯ ಪ್ರವಾಸೋದ್ಯಮ, ಸಾರಿಗೆ ಮತ್ತು ಸಾಗಾಟ ಸೇವೆಗಳು ಇದರಲ್ಲಿ ಸೇರಿವೆ. ಈ ಸೇವೆಗಳನ್ನು ಹೆಚ್ಚು ಸ್ಪರ್ಧಾತ್ಮಕವಾಗಿಸುವುದು ಮತ್ತು ರಫ್ತು ಸಾಧ್ಯತೆ ಹೆಚ್ಚಿಸುವುದು ಈ ನಿಧಿಯ ಉದ್ದೇಶವಾಗಿದೆ.

ಗುರಿ ಕೇಂದ್ರಿತವಾದ ಮತ್ತು ಮೇಲ್ವಿಚಾರಣೆ ಇರುವ ಕ್ರಿಯಾ ಯೋಜನೆಗಳ ಮೂಲಕ ಸೇವಾ ಕ್ಷೇತ್ರದ ಉತ್ತೇಜನ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಒಟ್ಟು ದೇಶೀ ಉತ್ಪನ್ನ ಹೆಚ್ಚಳ, ಉದ್ಯೋಗ ಸೃಷ್ಟಿ, ಜಾಗತಿಕ ಮಾರುಕಟ್ಟೆಗೆ ರಫ್ತು ಹೆಚ್ಚಳದ ಗುರಿಯೊಂದಿಗೆ ಸಂಪುಟವು ಈ ನಿರ್ಧಾರ ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.