ADVERTISEMENT

ಸಂಸದೀಯ ಸಮಿತಿ ಶಿಫಾರಸು

ಮಹಿಳಾ ಸರ್ಕಾರಿ ನೌಕರರಿಗೆ ಮನೆಯಲ್ಲೇ ಕೆಲಸ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2013, 19:59 IST
Last Updated 15 ಸೆಪ್ಟೆಂಬರ್ 2013, 19:59 IST

ನವದೆಹಲಿ: ಮಹಿಳಾ ನೌಕರರು ಅನಿ­ಶ್ಚಿತ ಕೆಲಸದ ಅವಧಿಯಲ್ಲಿ ಮನೆ­ಯಲ್ಲೇ ಸರ್ಕಾರಿ ಕೆಲಸ ಕಾರ್ಯ­ಗಳನ್ನು ­ನಿರ್ವಹಿಸಲು ಅನುಕೂಲವಾಗು­ವಂತೆ ಸಂಸದೀಯ ಸಮಿ­ತಿ­­ಯೊಂದು ಮಹ­ತ್ವದ ಶಿಫಾರಸು­ಗಳನ್ನು ಸರ್ಕಾ­ರದ ಮುಂದಿಟ್ಟಿದೆ.

ಸಂಸದೀಯ ಸಮಿತಿಯ ಈ ಶಿಫಾ­ರಸು­ಗಳನ್ನು ಯಥಾವತ್ತು ಅಳವಡಿಸಿ­ದರೆ, ಮಹಿ­ಳೆಗೆ ತಾಯಿ­ಯಾಗಿ ಕಾರ್ಯ ನಿರ್ವ­­ಹಿಸಲು ಮತ್ತು ಸರ್ಕಾರಿ ಸಂಸ್ಥೆ­ಗಳಲ್ಲಿ ನೌಕರಳಾಗಿ ದುಡಿಯಲು ಕಷ್ಟ­ವಾಗ­ಲಾರದು. ಆಗ ಆಕೆಗೆ ಕೆಲಸದ ಅವಧಿ­ಯಲ್ಲೇ ತನ್ನ ಮಗುವನ್ನು ನೋಡಿ­ಕೊಳ್ಳಲು ಸಾಧ್ಯ ವಾಗುತ್ತದೆ. ಇದರಿಂದ ಇವೆರಡರ ಮಧ್ಯೆ ಸಂಘರ್ಷ ತಡೆಯಲು ಆಕೆಗೆ ಸಹಾಯಕವಾಗುತ್ತದೆ ಎಂದು ನಂಬಲಾಗಿದೆ.

‘ಕೆಲಸದ ಅವಧಿ ಅಥವಾ ಮಹಿಳಾ ನೌಕರರು ಮನೆಯಲ್ಲೇ ದುಡಿ­ಯಲು ನೆರವಾಗುವ ನೀತಿ’ಯೊಂದನ್ನು ರೂಪಿಸುವ ಸಾಧ್ಯತೆಗಳನ್ನು ಪರಿಶೋಧಿ­ಸುವಂತೆ ಸಿಬ್ಬಂದಿ ಮತ್ತು ತರಬೇತಿ  ಸಚಿ­ವಾಲಯಕ್ಕೆ ಸೂಚಿಸಿ ಸಿಬ್ಬಂದಿ, ಸಾರ್ವ­ಜ­ನಿಕ ಕುಂದು­ಕೊರತೆ, ಕಾನೂನು ಹಾಗೂ ನ್ಯಾಯಾಂಗದ ಮೇಲಿನ ಸಂಸ­ದೀಯ ಸ್ಥಾಯಿ ಸಮಿ­ತಿ ಇತ್ತೀಚೆಗಷ್ಟೇ ಮುಕ್ತಾಯ­ವಾದ ಸಂಸತ್‌ ಅಧಿವೇಶನ­ದಲ್ಲಿ ತನ್ನ ವರದಿ ಮಂಡಿಸಿದೆ.

ಸರಳ ಸಮಯ ಮತ್ತು ಸುಲಭ ಸ್ಥಳ ಹಾಗೂ ಮಕ್ಕಳು ಚಿಕ್ಕವರಿರುವಾಗ ಅರ್ಧ ಅವಧಿಯ ಕೆಲಸ ನಿರ್ವಹಿಸಲು ಅನುವು ಮಾಡುವಂತೆ ನೌಕರರು ಕೇಳಿ­ರುವ ಬೇಡಿಕೆ­ಯನ್ನು ಅಳವಡಿಸಲು ಸಂಸ­ದೀಯ ಸಮಿತಿ ಸೂಚಿ­ಸಿದೆ. ಹಿಂದಿನ ವೇತನ ಆಯೋಗ­ಗಳಲ್ಲಿ ಶಿಫಾರಸು ಕಂಡಿದ್ದ ಈ ಬೇಡಿಕೆ­ಯನ್ನು ಆರನೇ ವೇತನ ಆಯೋಗ ತಿರಸ್ಕರಿಸಿತ್ತು.

ವಿವಿಧ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿ­ರುವ ಮಹಿಳೆಯರಿಗೂ ಸೌಲಭ್ಯಗಳನ್ನು ಕಲ್ಪಿ­ಸುವ ವಿಷಯವನ್ನೂ ಸಂಸದೀಯ ಸಮಿತಿ ಪ್ರಸ್ತಾಪಿಸಿದೆ.

ಈ ಮಹಿಳಾ ನೌಕ­ರ­ರಿಗೆ ದೀರ್ಘಾವಧಿಯ ಹೆರಿಗೆ ರಜೆ ಅಥವಾ ದೈನಂದಿನ ಸುರಕ್ಷಾ ಕೇಂದ್ರ­ಗಳು, ಕೆಲಸವನ್ನು ಆರಂಭಿಸಲು ಮತ್ತು ಮುಗಿ­ಸಲು ಅನಿಶ್ಚಿತ ಕೆಲಸದ ಅವಧಿ, ಹೆಚ್ಚುವರಿ ಮತ್ತು ರಾತ್ರಿಪಾಳಿ ಕೆಲಸ­ಗಳಿಗೆ ನಿರ್ಬಂಧ, ಮಗು ಮೂರು ವರ್ಷ­ವಾಗುವ ತನಕ ದಿನದಲ್ಲಿ ಎರಡು ಗಂಟೆ ಅಲ್ಪಾವಧಿಯ ರಜೆ, ಮಗುವನ್ನು ನೋಡಿಕೊಳ್ಳಲು ಅನುಕೂಲವಾಗು­ವಂತೆ ಪೋಷಕರಿಗೆ ಮಗು ಸಂರಕ್ಷಣಾ ರಜೆ, ಮಹಿಳೆಗೆ ಹೆರಿಗೆ ರಜೆ ಇತ್ಯಾದಿ ಸೌಲಭ್ಯ ಒದಗಿಸಲು ಸಮಿತಿ ತಿಳಿಸಿದೆ.

ಹೆರಿಗೆ ರಜೆ ಮಂಜೂರು ಮಾಡುವಲ್ಲಿ ವಿವಿಧ ಸಂಸ್ಥೆಗಳು ವಿಭಿನ್ನ ನೀತಿಗಳನ್ನು ಅಳವಡಿಸುತ್ತಿರುವ ಬಗ್ಗೆ ಸಮಿತಿ ಗಮನ ಸೆಳೆದಿದೆ. ಕೆಲವು ಸಂಸ್ಥೆಗಳು 180 ದಿನ, ಇನ್ನು ಕೆಲವು 135 ದಿನ, 90 ದಿನ, 84 ದಿನ ಮಾತ್ರ ಹೆರಿಗೆ ರಜೆ ನೀಡುತ್ತಿವೆ ಎಂದು ಹೇಳಿದೆ. ಸರ್ಕಾರಿ ಮತ್ತು ಅದರ ನಿಯಂತ್ರಣದಲ್ಲಿರುವ ಎಲ್ಲ ಇಲಾಖೆ­ಗಳು ಅಥವಾ ಸಂಸ್ಥೆಗಳಿಗೆ 180 ದಿನ­ಗಳ ಸಮಾನ ಮಾದರಿಯ ಹೆರಿಗೆ ರಜೆ ಮಾನ­ದಂಡವನ್ನು ಅಳವಡಿಸುವಂತೆ ಸಮಿತಿ ಸಲಹೆ ನೀಡಿದೆ.

ಇಂತಹ ಸಮಸ್ಯೆಗಳಲ್ಲಿ ಗಮನ ಸೆಳೆ­ಯಲು ನೆರವಾಗುವಂತೆ ಸರ್ಕಾರವು ನೌಕ­ರರ ಸಂಘ­ಗಳೊಂದಿಗೆ ಮಾತುಕತೆ ನಡೆ­ಸು­ವಾಗ ಮಹಿಳಾ ಪ್ರತಿನಿಧಿಗಳನ್ನೂ ಸೇರಿಸಿಕೊಳ್ಳಬೇಕು ಎಂದೂ  ಸಮಿತಿ  ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.