ADVERTISEMENT

ಸಂಸದ, ಶಾಸಕರ ಬಂಧನಕ್ಕೆ ವಾರಂಟ್‌

ಮುಜಾಫರ್‌ನಗರ ಕೋಮುಗಲಭೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2013, 19:59 IST
Last Updated 18 ಸೆಪ್ಟೆಂಬರ್ 2013, 19:59 IST

ಮುಜಾಫರ್‌ನಗರ (ಪಿಟಿಐ): ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ವಿವಿಧೆಡೆ ನಡೆದ ಕೋಮು ಗಲಭೆ ಸಂಬಂಧ ಒಬ್ಬ ಸಂಸದ,  ಬಿಜೆಪಿ ಮತ್ತು ಬಿಎಸ್‌ಪಿ ಶಾಸಕರು, ವಿವಿಧ ಧಾರ್ಮಿಕ ಮುಖಂಡರು ಸೇರಿ 16 ಜನರ  ಬಂಧನಕ್ಕೆ ಸ್ಥಳೀಯ ಕೋರ್ಟ್‌ ವಾರಂಟ್‌ ಹೊರಡಿಸಿದೆ.

ಬಿಎಸ್‌ಪಿ ಸಂಸದ ಖದೀರ್‌ ರಾಣಾ, ಬಿಜೆಪಿ ಶಾಸಕರಾದ ಸಂಗೀತ್‌ ಸೋಮ್‌, ಭರತೇಂದು ಸಿಂಗ್‌, ಬಿಎಸ್‌ಪಿ ಶಾಸಕರಾದ ನೂರ್‌ ಸಲಿಂ, ಮೌಲಾನಾ ಜಮೀಲ್‌, ಕಾಂಗ್ರೆಸ್‌ ಮುಖಂಡ ಸಯೀದ್‌ಜಮಾನ್‌ ಹಾಗೂ ಬಿಕೆಯು ಮುಖ್ಯಸ್ಥ ನರೇಶ್‌ ಟಿಕಾಯತ್‌ ಈ ಪಟ್ಟಿಯಲ್ಲಿ ಇದ್ದಾರೆ.

ಕೋಮು ದ್ವೇಷ ಪ್ರಚೋದನಕಾರಿ ಭಾಷಣ ಮಾಡಿದ ಆರೋಪವನ್ನು ಈ ಮುಖಂಡರ ಮೇಲೆ ಹೊರಿಸಲಾಗಿದೆ. ಇವರೆಲ್ಲರ ವಿರುದ್ಧ ಎರಡು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹಿರಿಯ ಪೊಲೀಸ್‌ ಅಧಿಕಾರಿ ಪ್ರವೀಣ್‌ ಕುಮಾರ್‌ ತಿಳಿಸಿದರು.
‘ಈಗಾಗಲೆ ನಾವು 3–4 ರಾಜಕಾರಣಿಗಳನ್ನು ಬಂಧಿಸಿದ್ದು, ಗಲಭೆಯಲ್ಲಿ ವಹಿಸಿದ ಪಾತ್ರದ ಕುರಿತು ಪುರಾವೆಗಳನ್ನು ಕಲೆಹಾಕುತ್ತಿದ್ದೇವೆ’ ಎಂದರು.

ಲಖನೌ ವರದಿ: ಈ ನಡುವೆ ಜಾಮೀನುರಹಿತ ಬಂಧನದ ವಾರಂಟ್‌ಗೆ ಒಳಗಾಗಿರುವ ಬಿಜೆಪಿ ಶಾಸಕ ಸಂಗೀತ್‌ ಸೋಮ್‌ ಹೇಳಿಕೆ ನೀಡಿ, ‘ಬಂಧನಕ್ಕೆ ಒಳಗಾಗಲು ನಾನು ಸಿದ್ಧ, ಆದರೆ ಇಡೀ ಘಟನೆಯನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಗಲಭೆಯ ಸಂಬಂಧ ಸರ್ಕಾರ ಹೇಳುತ್ತಿರುವುದೆಲ್ಲ ಸತ್ಯಕ್ಕೆ ದೂರವಾಗಿದ್ದು ಒಂದು ಸಮುದಾಯದವರನ್ನು ಓಲೈಸುವ ನೀತಿ ಅದರದು’ ಎಂದು ಟೀಕಿಸಿದ್ದಾರೆ.

ಗಲಭೆಯಲ್ಲಿ ಉತ್ತರ ಪ್ರದೇಶದ ಸಚಿವ ಅಜಂ ಖಾನ್‌ ಪಾತ್ರದ ಕುರಿತು ವಿವಿಧ ವಾಹಿನಿಗಳು ವರದಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದಾರೆ.

ಶಿಕ್ಷೆಗೆ ಸಿದ್ಧ–ಖಾನ್‌: ಗಲಭೆಯಲ್ಲಿ ತಮ್ಮ ಪಾತ್ರ ಇರುವ ಕುರಿತು ಕೆಲ ವಾಹಿನಿಗಳು ಮಾಡಿರುವ ವರದಿಗೆ ಪ್ರತಿಕ್ರಿಯೆ ನೀಡಿದ ಸಚಿವ ಅಜಂ ಖಾನ್‌, ‘ನಾನು ತಪ್ಪಿತಸ್ಥ ಎಂದು ಸಾಬೀತಾದಲ್ಲಿ ಯಾವುದೇ ಶಿಕ್ಷೆಗೂ ಸಿದ್ಧ. ನಾನು ಅಂತಹ ವ್ಯಕ್ತಿ ಅಲ್ಲ. ದೇಶ ಆಳಲು ಯತ್ನಿಸುತ್ತಿರುವ ಪಕ್ಷಗಳ ಒತ್ತಡಕ್ಕೆ ಈ ವಾಹಿನಿಗಳು ಒಳಗಾಗಿರಬಹುದು’ ಎಂದು ಆರೋಪಿಸಿದರು.

ರಾಷ್ಟ್ರಪತಿ ಆಡಳಿತ: ಬಿಜೆಪಿ ಆಗ್ರಹ
ನವದೆಹಲಿ (ಐಎಎನ್‌ಎಸ್‌):
ಕೋಮು ಗಲಭೆಗೆ ತುತ್ತಾಗಿರುವ ಉತ್ತರ ಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಬಿಜೆಪಿ ಒತ್ತಾಯಿಸಿದೆ.

‘ಸಮಾಜವಾದಿ ಪಕ್ಷ ಅಧಿಕಾರದಲ್ಲಿ ಇರುವ ನೈತಿಕತೆ ಕಳೆದುಕೊಂಡಿದ್ದು ಕೂಡಲೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು’ ಎಂದು ಬಿಜೆಪಿ ಅಧ್ಯಕ್ಷ ರಾಜನಾಥ್‌ ಸಿಂಗ್‌ ಒತ್ತಾಯಿಸಿದರು. ರಾಜ್ಯ ಸರ್ಕಾರ ‘ಒಡೆದು ಆಳುವ ನೀತಿ’ ಅನುಸರಿಸುತ್ತಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.