ADVERTISEMENT

ಸಚಿವರ ಟೀಕೆಗೆ ‘ಸುಪ್ರೀಂ’ ಗರಂ

ಸಲಿಂಗ ಕಾಮ ಕುರಿತ ತೀರ್ಪು

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 19:30 IST
Last Updated 3 ಜನವರಿ 2014, 19:30 IST

ನವದೆಹಲಿ: (ಪಿಟಿಐ) ಸಲಿಂಗ ಕಾಮದ ಕುರಿತು ತಾನು ಈಚೆಗೆ ನೀಡಿರುವ ತೀರ್ಪನ್ನು ಟೀಕಿಸುವ ರೀತಿಯಲ್ಲಿ ಕೇಂದ್ರ ಕಾನೂನು ಸಚಿವ ಕಪಿಲ್‌ ಸಿಬಲ್‌ ಸೇರಿದಂತೆ ಹಲವು ಸಚಿವರು ಹೇಳಿಕೆ ನೀಡುತ್ತಿರುವುದನ್ನು ಬಲವಾಗಿ ಆಕ್ಷೇಪಿಸಿರುವ ಸುಪ್ರೀಂ ಕೋರ್ಟ್ ‘ಇದು ಉತ್ತಮ ಅಭಿರುಚಿ ಅಲ್ಲ’ ಎಂದಿದೆ.

ಇಂತಹ ಸಚಿವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದೆಹಲಿ ನಿವಾಸಿಯೊಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ
ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಮುಖ್ಯನ್ಯಾಯಮೂರ್ತಿ ಪಿ. ಸದಾಶಿವಂ ನೇತೃತ್ವದ ಪೀಠ, ‘ಉನ್ನತ ಸ್ಥಾನಗಳಲ್ಲಿ ಇರುವವರು ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಮಾತನಾಡುವುದು ಉತ್ತಮ ಅಭಿರುಚಿ ಎನಿಸದು. ಇಂತಹ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು’ ಎಂದಿದೆ.

ಸಿಬಲ್‌ ಅಲ್ಲದೇ ಮಿಲಿಂದ್‌ ದೇವ್ರಾ, ಪಿ.ಚಿದಂಬರಂ ಹಾಗೂ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರು ಮಾಡಿರುವ ಟೀಕೆಗಳನ್ನು ಪರಿಶೀಲಿಸಿದ ಪೀಠ ‘ಅವರು ಇಂತಹ ಹೇಳಿಕೆಗಳನ್ನು ಸುಲಭವಾಗಿ ನೀಡುತ್ತಾರೆ. ನಾವು ಇವನ್ನು ಅಸಮರ್ಥನೀಯ ಟೀಕೆಗಳು ಎಂದು ಪರಿಗಣಿಸುತ್ತೇವೆ’ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.