ADVERTISEMENT

ಸಜ್ಜನ್ ಕುಮಾರ್ ಅರ್ಜಿ ವಜಾ

1984ರ ಸಿಖ್ ವಿರೋಧಿ ದಂಗೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2013, 13:09 IST
Last Updated 3 ಡಿಸೆಂಬರ್ 2013, 13:09 IST

ನವದೆಹಲಿ (ಪಿಟಿಐ) :  1984ರ ಸಿಖ್ ವಿರೋಧಿ ದಂಗೆಗಳ ಪ್ರಕರಣದಿಂದ ತಮ್ಮನ್ನು ಖುಲಾಸೆ ಮಾಡುವಂತೆ ಕೋರಿ ಕಾಂಗ್ರೆಸ್ ಧುರಿಣ ಸಜ್ಜನ್ ಕುಮಾರ್ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ತಿರಸ್ಕರಿಸಿತು.

ತಮ್ಮ ವಿರುದ್ಧದ ದೋಷಾರೋಪವನ್ನು ವಜಾ ಮಾಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯು ಕೆಳ ನ್ಯಾಯಾಲಯ ಮತ್ತು ದೆಹಲಿ ಹೈಕೋರ್ಟ್ ತಳ್ಳಿಹಾಕಿತ್ತು. ಹೀಗಾಗಿ, ಸಜ್ಜನ್ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ ನ್ಯಾಯಮೂರ್ತಿ ಎ.ಕೆ.ಪಟ್ನಾಯಿಕ್ ಅವರ ನೇತೃತ್ವದ ಪೀಠವು ಅರ್ಜಿಯನ್ನು ಮಾನ್ಯ ಮಾಡಲಿಲ್ಲ.

ಇದೇ ಪ್ರಕರಣಕ್ಕೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳಾದ ವೇದ ಪ್ರಕಾಶ್ ಪೈ ಮತ್ತು ಬ್ರಹ್ಮಾನಂದ ಗುಪ್ತಾ ಅವರು ಪ್ರಕರಣದಿಂದ ತಮ್ಮನ್ನು ಖುಲಾಸೆ ಮಾಡುವಂತೆ ಮಾಡಿದ್ದ ಮನವಿಯನ್ನೂ ನ್ಯಾಯಪೀಠವು ಪುರಸ್ಕರಿಸಿಲ್ಲ.

ADVERTISEMENT

ವಿಚಾರಣಾ ನ್ಯಾಯಾಲಯವು 2010ರ ಜುಲೈ ತಿಂಗಳಲ್ಲಿ ಆರೋಪಿಗಳಾದ ಸಜ್ಜನ್ ಕುಮಾರ್, ಬ್ರಹ್ಮಾನಂದ ಗುಪ್ತಾ, ಪೆರು, ಖುಶಾಲ್ ಸಿಂಗ್ ಮತ್ತು ವೇದ ಪ್ರಕಾಶ್  ವಿರುದ್ಧ ಆರು ಮಂದಿಯ ಕೊಲೆ ಪ್ರಕರಣದಲ್ಲಿ ದೋಷಾರೋಪ ಹೊರಿಸುವಂತೆ ಆಜ್ಞಾಪಿಸಿತ್ತು. 1984ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ಸಂಭವಿಸಿದ ಸಿಖ್ ವಿರೋಧಿ ದಂಗೆ ಕಾಲದಲ್ಲಿ ಈ ಹತ್ಯೆ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.