ADVERTISEMENT

ಸತ್ಯಂ ಹಗರಣ: ಐವರಿಗೆ ಸುಪ್ರೀಂ ಜಾಮೀನು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನವದೆಹಲಿ, (ಪಿಟಿಐ): ಕೋಟ್ಯಂತರ ರೂಪಾಯಿ ಮೋಸದ ವ್ಯವಹಾರದಲ್ಲಿ ಶಾಮೀಲಾಗಿದ್ದಾರೆ ಎಂಬ ಕಾರಣಕ್ಕೆ ಬಂಧನದಲ್ಲಿದ್ದ ಸತ್ಯಂ ಕಂಪ್ಯೂಟರ್ಸ್‌ನ ನಾಲ್ವರು ಮಾಜಿ ಅಧಿಕಾರಿಗಳು ಹಾಗೂ ಪ್ರೈಸ್ ವಾಟರ್‌ಹೌಸ್ ಕೂಪರ್ಸ್‌ನ ಮಾಜಿ ಲೆಕ್ಕಪರಿಶೋಧಕರಿಗೆ ಬುಧವಾರ ಸುಪ್ರೀಂಕೋರ್ಟ್ ಜಾಮೀನು ನೀಡಿದೆ.

`ಪ್ರಕರಣದ ಒಟ್ಟಾರೆ ಸಂದರ್ಭ ಪರಿಶೀಲಿಸಿದಾಗ, ಐದು ಮಂದಿಯನ್ನು ಎರಡು ಲಕ್ಷ ರೂಪಾಯಿಯ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇನ್ನೊಂದು ಭದ್ರತೆಯನ್ನು ಪಡೆದು ಜಾಮೀನಿನ ಮೇಲೆ ಬಿಡುಗಡೆ ಮಾಡುವುದು ಸಮಂಜಸವೆಂದು ಭಾವಿಸುತ್ತೇವೆ~ ಎಂದು ನ್ಯಾಯಮೂರ್ತಿ ದಲ್ವೀರ್ ಭಂಡಾರಿ ಮತ್ತು ದೀಪಕ್ ಮಿಶ್ರ ಆದೇಶದಲ್ಲಿ ತಿಳಿಸಿದ್ದಾರೆ.

ಜಾಮೀನು ದೊರಕಿರುವ ಕಂಪೆನಿಯ ಮಾಜಿ ನೌಕರರೆಂದರೆ ಆಂತರಿಕ ಮುಖ್ಯ ಲೆಕ್ಕ ಪರಿಶೋಧಕ ವಿ.ಎಸ್.ಪ್ರಭಾಕರ ಗುಪ್ತ, ಕಾರ್ಯ ನಿರ್ವಾಹಕರಾದ ಜಿ.ರಾಮಕೃಷ್ಣ, ಡಿ.ವೆಂಕಟಪತಿರಾಜು, ಚ.ಶ್ರೀಶೈಲಂ ಮತ್ತು ಲೆಕ್ಕಪರಿಶೋಧಕ ಸುಬ್ರಮಣಿ ಗೋಪಾಲಕೃಷ್ಣ. ಆಂಧ್ರ ಪ್ರದೇಶ ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕರಿಸಿ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಈ ಐವರೂ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ಸತ್ಯಂ ಹಗರಣದ ಹತ್ತು ಆಪಾದಿತರ ಪೈಕಿ ಕಂಪೆನಿಯ ಸ್ಥಾಪಕ ಬಿ.ರಾಮಲಿಂಗರಾಜು, ಅವರ ಸಹೋದರ ಬಿ.ಸತ್ಯನಾರಾಯಣ ರಾಜು, ಮಾಜಿ ಲೆಕ್ಕಪರಿಶೋಧಕ ಟಿ.ಶ್ರೀನಿವಾಸ್ ಅವರಿಗೆ ಬೇರೆಬೇರೆ ನ್ಯಾಯಾಲಯಗಳು ಈಗಾಗಲೇ ಜಾಮೀನು ಮಂಜೂರು ಮಾಡಿದ್ದರೂ ಹೈಕೋರ್ಟ್ ಅವರ ಜಾಮೀನನ್ನು ರದ್ದು ಪಡಿಸಿರುವುದರಿಂದ ಅವರೆಲ್ಲರೂ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ಇದ್ದಾರೆ. ಇವರು ಸುಪ್ರೀಂಕೋರ್ಟ್‌ನಲ್ಲಿ ಇದುವರೆಗೆ ಮೇಲ್ಮನವಿ ಸಲ್ಲಿಸಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.