ADVERTISEMENT

ಸದಾನಂದ ಗೌಡ ರಾಜೀನಾಮೆ; ಶೆಟ್ಟರ್ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 8 ಜುಲೈ 2012, 10:40 IST
Last Updated 8 ಜುಲೈ 2012, 10:40 IST

ನವ ದೆಹಲಿ (ಪಿಟಿಐ): ಲಿಂಗಾಯಿತ ಮುಖಂಡ ಬಿ.ಎಸ್.ಯಡಿಯೂರಪ್ಪ ಅವರ ಒತ್ತಾಯಕ್ಕೆ ಮಣಿದ ಬಿಜೆಪಿ ವರಿಷ್ಠರು, ಮುಂದಿನ ವಿಧಾನಸಭೆಯನ್ನು ಗಮನದಲ್ಲಿಟ್ಟುಕೊಂಡು ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ವಿ.ಸದಾನಂದ ಗೌಡ ಅವರ ತಲೆದಂಡ ಪಡೆದಿದೆ. ಇದೇ ಸಂದರ್ಭದಲ್ಲಿ ಲಿಂಗಾಯಿತ ಸಮುದಾಯಕ್ಕೆ ಸೇರಿದ ಗ್ರಾಮೀಣಾಭಿವೃದ್ಧ ಸಚಿವ ಜಗದೀಶ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿದೆ.

~ಕರ್ನಾಕಟದಲ್ಲಿ ಸಧ್ಯದ ರಾಜಕೀಯ ಪರಿಸ್ಥಿತಿಯನ್ನು ಅವಲೋಕಿಸಿ ಸದಾನಂದ ಗೌಡ ಅವರು ತಮ್ಮ ರಾಜೀನಾಮನೆಯನ್ನು ಇಂದು ನನಗೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿಯಲ್ಲಿ ಉತ್ತಮ ಕೆಲಸ ಕಾರ್ಯಗಳೊಂದಿಗೆ ಉತ್ತಮ ಆಡಳಿತ ನೀಡಿದ್ದಾರೆ~ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ತಿಳಿಸಿದ್ದಾರೆ.

~ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪಗಳಿಲ್ಲ. ಆದರೆ ಪಕ್ಷದ ಹಿತದೃಷ್ಟಿಯಿಂದ ಹಾಗೂ ಪಕ್ಷದ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ~ ಎಂದು ಸುದ್ದಿಗಾರರನ್ನುದ್ದೇಶಿಸಿ ಅವರು ಮಾತನಾಡಿದರು.

ADVERTISEMENT

~ಜಗದೀಶ್ ಶೆಟ್ಟರ್ ಅವರನ್ನು ಮುಂದಿನ ಮುಖ್ಯಮಂತ್ರಿಯನ್ನಾಗಿ ನೇಮಿಸಲು ಪಕ್ಷ ತೀರ್ಮಾನಿಸಿದ್ದು, ನಾಳೆ ಬಿಜೆಪಿ ಧುರೀಣರಾದ ರಾಜನಾಥ ಸಿಂಗ್ ಹಾಗೂ ಅರುಣ್ ಜೇಟ್ಲಿ ಅವರು ಬೆಂಗಳೂರಿಗೆ ತೆರಳಿ ಔಪಚಾರಿಕವಾಗಿ ಪಕ್ಷದ ಶಾಸಕಾಂಗ ಸಭೆ ಕರೆಯಲಿದ್ದಾರೆ~ ಎಂದು ಗಡ್ಕರಿ ತಿಳಿಸಿದರು.

ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ~ಅಂಥ ಯಾವುದೇ ವಿಷಯವನ್ನು ಪಕ್ಷ ಈವರೆಗೂ ತೆಗೆದುಕೊಂಡಿಲ್ಲ. ಮುಂದಿನ ಹತ್ತು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯುವುದರಿಂದ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಪಕ್ಷ ಉತ್ತಮ ಬಹುಮತ ಗಳಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಲಿಂಗಾಯಿತ ಕೋಮಿನ ಪ್ರಶ್ನಾತೀತ ನಾಯಕನಿಗೆ ಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗಿದೆ~ ಎಂದು ಅವರು ತಿಳಿಸಿದರು.

ಸದಾನಂದ ಗೌಡ ಅವರು ಅಧಿಕೃತವಾಗಿ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರಿಗೆ ಬುಧವಾರ ತಮ್ಮ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

2008ರಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಿ.ಎಸ್.ಯಡಿಯೂರಪ್ಪ ಭ್ರಷ್ಟಾಚಾರದ ಆರೋಪದ ಮೇಲೆ ರಾಜೀನಾಮೆ ನೀಡಿದ್ದರು. ನಂತರ ಬಂದ ಡಿ.ವಿ.ಸದಾನಂದ ಗೌಡ ಅವರು 11 ತಿಂಗಳ ಅಧಿಕಾರ ನಡೆಸಿ ಈಗ ರಾಜೀನಾಮೆ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.