ADVERTISEMENT

ಸಬ್ಸಿಡಿ ಎಲ್‌ಪಿಜಿ 9ಕ್ಕೆ ಏರಿಕೆ

. ಪೆಟ್ರೋಲ್ 25 ಪೈಸೆ ಅಗ್ಗ. ಡೀಸೆಲ್ ತಿಂಗಳಿಗೆ 50 ಪೈಸೆ ತುಟ್ಟಿ

​ಪ್ರಜಾವಾಣಿ ವಾರ್ತೆ
Published 17 ಜನವರಿ 2013, 19:59 IST
Last Updated 17 ಜನವರಿ 2013, 19:59 IST
ಸಬ್ಸಿಡಿ ಎಲ್‌ಪಿಜಿ 9ಕ್ಕೆ ಏರಿಕೆ
ಸಬ್ಸಿಡಿ ಎಲ್‌ಪಿಜಿ 9ಕ್ಕೆ ಏರಿಕೆ   

ನವದೆಹಲಿ (ಪಿಟಿಐ): ಗೃಹಬಳಕೆಗಾಗಿ ಒಂದು ವರ್ಷದ ಅವಧಿಯಲ್ಲಿ ಪೂರೈಸುವ ಸಬ್ಸಿಡಿ ದರದ ಅಡುಗೆ ಅನಿಲ ಸಿಲಿಂಡರ್‌ಗಳ (ಎಲ್‌ಪಿಜಿ) ಸಂಖ್ಯೆಯನ್ನು ಈಗಿನ 6ರ ಬದಲು 9ಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದರೆ ಈ ಹೆಚ್ಚಳ ಬರುವ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ.

ಅಲ್ಲದೆ, ಬರುವ ಮಾರ್ಚ್ 31ರ ವರೆಗೆ ಪ್ರತಿ ಬಳಕೆದಾರರಿಗೆ 3 ರ ಬದಲು 5 ಸಬ್ಸಿಡಿ ಸಿಲಿಂಡರ್ ದೊರೆಯಲಿವೆ.ಇದರ ಜತೆಗೆ, ಸಂದರ್ಭಾನುಸಾರ ಡೀಸೆಲ್ ಬೆಲೆಯನ್ನು ಅಲ್ಪ ಪ್ರಮಾಣದಲ್ಲಿ ಹೆಚ್ಚಿಸುವ ಅಧಿಕಾರವನ್ನು ತೈಲ ಕಂಪೆನಿಗಳಿಗೆ ನೀಡಿದೆ. ಇದರಿಂದ ಪ್ರತಿ ಲೀಟರ್ ಡೀಸೆಲ್ ಬೆಲೆ ತಿಂಗಳಿಗೆ 50 ಪೈಸೆಯಷ್ಟು ಹೆಚ್ಚಾಗುವ ನಿರೀಕ್ಷೆ ಇದೆ. ಸರ್ಕಾರ ಡೀಸೆಲ್ ಬೆಲೆಯನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿರುವುದರಿಂದಾಗಿ ಕಾಲಾನುಕ್ರಮದಲ್ಲಿ ಚಿಕ್ಕಪುಟ್ಟ ಪ್ರಮಾಣದಲ್ಲಿ ಏರಿಕೆಯಾಗುವ ಸಂಭವವಿದೆ. ಆದರೆ ಒಂದು ಕೈಯಿಂದ ಕೊಟ್ಟು ಇನ್ನೊಂದು ಕಸಿದುಕೊಳ್ಳುವ ನೀತಿಯಂತೆ ಪೆಟ್ರೋಲ್ ದರದಲ್ಲಿ ಲೀಟರ್‌ಗೆ 25 ಪೈಸೆ ಇಳಿಕೆ ಮಾಡಿದೆ.

ಎಲ್‌ಪಿಜಿ ಮತ್ತು ಸೀಮೆಎಣ್ಣೆ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡದಿರಲು ಸರ್ಕಾರ ತೀರ್ಮಾನಿಸಿದೆ.ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಗುರುವಾರ ನಡೆದ ರಾಜಕೀಯ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಸಭೆಯಲ್ಲಿ ಈ ಮಹತ್ವದ ನಿರ್ಧಾರಗಳನ್ನು  ತೆಗೆದುಕೊಳ್ಳಲಾಗಿದೆ. ಜನಪ್ರಿಯತೆ ಹಾಗೂ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರ ಇಟ್ಟಿರುವ ಈ ಹೆಜ್ಜೆ ಗ್ರಾಹಕರಲ್ಲಿ ಮಿಶ್ರ ಭಾವವನ್ನು ಹುಟ್ಟುಹಾಕಿದೆ. ಎಲ್‌ಪಿಜಿ ಗ್ರಾಹಕರ ಮುಖದಲ್ಲಿ ನಗು ಅರಳಿದರೆ, ಡೀಸೆಲ್ ಗ್ರಾಹಕರ ಮೇಲೆ ಹೊರೆ ಬೀಳಲಿದೆ.

`ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯ ಏರಿಳಿತಗಳ ಆಧಾರದ ಮೇಲೆ ಕಾಲ, ಕಾಲಕ್ಕೆ ಡೀಸೆಲ್ ಬೆಲೆ ಪರಿಷ್ಕರಣೆಯ ನಿರ್ಧಾರದ ಅಧಿಕಾರವನ್ನು ತೈಲ ಕಂಪೆನಿಗಳಿಗೆ ವಹಿಸಲಾಗಿದೆ. ಗುರುವಾರ ಮಧ್ಯರಾತ್ರಿಯಿಂದಲೇ ಹೊಸ ದರಗಳು ಜಾರಿಯಾಗಲಿವೆ' ಎಂದು ಸಭೆಯಿಂದ ಹೊರಬಂದ ನಂತರ ಪೆಟ್ರೋಲಿಯಂ ಸಚಿವ ಎಂ. ವೀರಪ್ಪ ಮೊಯಿಲಿ ಸುದ್ದಿಗಾರರಿಗೆ ತಿಳಿಸಿದರು.

ಸೀಮಿತ ಅಧಿಕಾರ: ಇನ್ನೊಂದೆಡೆ ಹಣಕಾಸು ಸಚಿವ ಪಿ.ಚಿದಂಬರಂ ಮಾತನಾಡಿ, `ಕೇವಲ ಚಿಕ್ಕಪುಟ್ಟ ದರ ಪರಿಷ್ಕರಣೆ ಅಧಿಕಾರವನ್ನು ಮಾತ್ರ ತೈಲ ಕಂಪೆನಿಗಳಿಗೆ ನೀಡಲಾಗಿದೆಯೇ ಹೊರತು ಸಂಪೂರ್ಣ ಅಧಿಕಾರವನ್ನಲ್ಲ' ಎಂದು ಸ್ಪಷ್ಟಪಡಿಸಿದರು.
`ಸಂದರ್ಭಕ್ಕೆ ಅನುಸಾರವಾಗಿ ಡೀಸೆಲ್ ಬೆಲೆಯಲ್ಲಿ ಸಣ್ಣಪುಟ್ಟ ಪರಿಷ್ಕರಣೆ ಮಾಡುವ ಅಧಿಕಾರವನ್ನು ರಾಜಕೀಯ ವ್ಯವಹಾರಗಳ ಸಂಪುಟ ಸಮಿತಿಯು ತೈಲ ಕಂಪೆನಿಗಳಿಗೆ ನೀಡಿದೆ. ಹೊಸ ದರ ಜಾರಿಗೆ ಬರುವ ದಿನ ಮತ್ತು ದರ ಏರಿಕೆ ಪ್ರಮಾಣ ಕುರಿತು ಚರ್ಚೆಯಾಗಿಲ್ಲ' ಎಂದು ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ಜಿ.ಸಿ. ಚತುರ್ವೇದಿ ದೃಢಪಡಿಸಿದರು.

`ಡೀಸೆಲ್ ಬೆಲೆಯನ್ನು ಸರ್ಕಾರ ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿಲ್ಲ. ಒಂದು ವೇಳೆ ಹಾಗಾದಲ್ಲಿ ಪ್ರತಿ ಲೀಟರ್ ಬೆಲೆ 9.60 ರೂಪಾಯಿಯಷ್ಟು ತುಟ್ಟಿಯಾಗುತ್ತದೆ. ಇದು ಅಸಾಧ್ಯದ ಮಾತು. ಅಲ್ಪ ಪ್ರಮಾಣದಲ್ಲಿ ಮಾತ್ರ ಬೆಲೆ ಏರಿಕೆಯಾಗಲಿದೆ' ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು.

`ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಸದ್ಯ ಪ್ರತಿ ಲೀಟರ್‌ಗೆ 9.60 ರೂಪಾಯಿ ನಷ್ಟದಲ್ಲಿ ಡೀಸೆಲ್ ಮಾರಾಟ ಮಾಡುತ್ತಿವೆ. ಮಾರುಕಟ್ಟೆಯಲ್ಲಿ ಪ್ರತಿ ಲೀಟರ್ ಡೀಸೆಲ್ 47.15 ರೂಪಾಯಿ, ಸೀಮೆಎಣ್ಣೆ 30.64 ರೂಪಾಯಿ, ಎಲ್‌ಪಿಜಿ (14.2 ಕೆ.ಜಿ.) - 410.50 ರೂಪಾಯಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರದ ಬೊಕ್ಕಸಕ್ಕೆ 1,65,000 ಕೋಟಿ ರೂಪಾಯಿ ನಷ್ಟವಾಗಿದೆ. ಆದರೂ ಸರ್ಕಾರ ಡೀಸೆಲ್, ಎಲ್‌ಪಿಜಿ, ಸೀಮೆಎಣ್ಣೆ ಮೇಲಿನ ಸಬ್ಸಿಡಿಯನ್ನು ಮುಂದುವರೆಸಲಿದೆ. ಹಣಕಾಸು ಸಚಿವಾಲಯ ಈ ಹೊರೆಯನ್ನು ನಿಭಾಯಿಸುತ್ತದೆ' ಎಂದು ಅವರು ಹೇಳಿದರು.

ಗ್ರಾಹಕರಿಗೆ ಬಿಸಿ

ಈ ಮೊದಲು ಸೆಪ್ಟೆಂಬರ್ 14 ರಂದು ಪ್ರತಿ ಲೀಟರ್ ಡೀಸೆಲ್ ಬೆಲೆಯನ್ನು ಏಕಾಏಕಿ 5.63 ರೂಪಾಯಿಗೆ ಏರಿಸುವ ಮೂಲಕ ಸರ್ಕಾರ, ಗ್ರಾಹಕರಿಗೆ ಬಿಸಿ ಮುಟ್ಟಿಸಿತ್ತು.14.2 ಕೆ.ಜಿ. ತೂಕದ ಸಬ್ಸಿಡಿ ಗೃಹೋಪಯೋಗಿ ಅಡುಗೆ ಅನಿಲ ಸಿಲಿಂಡರ್ ಸದ್ಯದ ಬೆಲೆ 410.50 ರೂಪಾಯಿಗಳಾಗಿವೆ. ಸಬ್ಸಿಡಿ ಮಿತಿ ದಾಟಿ ಹೆಚ್ಚುವರಿ ಸಿಲಿಂಡರ್ ಬೇಕಾದರೆ ಪ್ರತಿ ಸಿಲಿಂಡರ್‌ಗೆ 895.50 ರೂಪಾಯಿ ತೆರಬೇಕಾಗುತ್ತದೆ.

ಕಾಳಸಂತೆಯಲ್ಲಿ ಅಡುಗೆ ಅನಿಲ ಸಿಲಿಂಡರ್ ಮಾರಾಟ ಮತ್ತು ದುರುಪಯೋಗಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸೆಪ್ಟೆಂಬರ್‌ನಲ್ಲಿ ಸರ್ಕಾರ ಸಬ್ಸಿಡಿ ಮಿತಿಯನ್ನು ಆರು ಸಿಲಿಂಡರ್‌ಗಳಿಗೆ ನಿಗದಿಗೊಳಿಸಿತ್ತು. ಜನಸಂಖ್ಯೆಯ ಕೇವಲ ಶೇ 44ರಷ್ಟು ಜನರು ಮಾತ್ರ ಪ್ರತಿ ವರ್ಷ ಆರು ಅಥವಾ ಅದರೊಳಗಿನ ಸಂಖ್ಯೆಯ ಸಿಲಿಂಡರ್ ಬಳಸುತ್ತಾರೆ ಎಂದು ಸರ್ಕಾರ ಸಮಜಾಯಿಷಿ ನೀಡಿತ್ತು. ಆದರೂ ಈ ನಿರ್ಧಾರ ದೇಶದಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿತ್ತು.

ADVERTISEMENT

5 ಸಿಲಿಂಡರ್
ಇಂದಿನ ಈ ನಿರ್ಧಾರದಿಂದಾಗಿ ಗ್ರಾಹಕರು 2012ರ ಸೆಪ್ಟೆಂಬರ್‌ನಿಂದ ಮಾರ್ಚ್ 31ರವರೆಗೆ ಮೂರರ ಬದಲು ಐದು ಸಬ್ಸಿಡಿ ಸಿಲಿಂಡರ್ ಪಡೆಯಲಿದ್ದಾರೆ. ಏಪ್ರಿಲ್ 1ರ ನಂತರ ಗ್ರಾಹಕರಿಗೆ ಪ್ರತಿ ವರ್ಷ 9 ಸಿಲಿಂಡರ್ ದೊರೆಯಲಿವೆ. ಇದರಿಂದಾಗಿ ಸರ್ಕಾರಕ್ಕೆ ಪ್ರತಿ ವರ್ಷ 9,300 ಕೋಟಿ ರೂಪಾಯಿ ಹೆಚ್ಚುವರಿ ಹೊರೆ ಬೀಳಲಿದೆ.ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಪೆಟ್ರೋಲ್ ಪಂಪ್ ಮಾಲೀಕರು ಡೀಸೆಲ್ ಮಾರಾಟ ಸ್ಥಗಿತಗೊಳಿಸಬಹುದು ಎಂಬ ಕಾರಣದಿಂದ ಸರ್ಕಾರ ಬೆಲೆ ಏರಿಕೆ ಪ್ರಮಾಣ ಮತ್ತು ಸಮಯವನ್ನು ಗೌಪ್ಯವಾಗಿ ಇಟ್ಟಿದೆ ಎಂದು ಮೂಲಗಳು ತಿಳಿಸಿವೆ.

ಆಯೋಗ ಹಸಿರು ನಿಶಾನೆ
ಎಲ್‌ಪಿಜಿ ಮಿತಿ ಹೆಚ್ಚಿಸುವ ಸರ್ಕಾರದ ನಿರ್ಧಾರಕ್ಕೆ ಚುನಾವಣಾ ಆಯೋಗ ಹಸಿರು ನಿಶಾನೆ ತೋರಿದೆ. ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಆಯೋಗದ ಸಭೆ, ಸರ್ಕಾರದ ಈ ತೀರ್ಮಾನದ ಕುರಿತು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ.

ಮುಂದಿನ ತಿಂಗಳು ನಾಗಾಲ್ಯಾಂಡ್, ತ್ರಿಪುರಾ, ಮೇಘಾಲಯಗಳಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಎಲ್‌ಪಿಜಿ ಮಿತಿ ಹೆಚ್ಚಳ ನಿರ್ಣಯ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದೆಯೇ ಎಂಬ ಆತಂಕ ಕೇಂದ್ರಕ್ಕಿತ್ತು. ಹೀಗಾಗಿ ಸರ್ಕಾರ ಬುಧವಾರ ಆಯೋಗಕ್ಕೆ ಪತ್ರ ಬರೆದು ಅಭಿಪ್ರಾಯ ತಿಳಿಸುವಂತೆ ಕೋರಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.