ADVERTISEMENT

ಸಮರ ಸನ್ನಿವೇಶ ಸೃಷ್ಟಿಸಿದ ಪಾಕ್‌ನ ಜೈಷ್‌

ಪಿಟಿಐ
Published 3 ಮಾರ್ಚ್ 2019, 19:02 IST
Last Updated 3 ಮಾರ್ಚ್ 2019, 19:02 IST
   

ನವದೆಹಲಿ: ಪಾಕಿಸ್ತಾನ ಮೂಲದ ಉಗ್ರ ಸಂಘಟನೆ ಜೈಷ್–ಎ–ಮೊಹಮ್ಮದ್‌ ಭಾಗವಾಗಿರುವ ಘಾಜ್ವಾ–ಎ–ಹಿಂದ್‌ ಕಳೆದ ಎರಡು ದಶಕದಲ್ಲಿ ಎರಡು ಬಾರಿ ಭಾರತ ಮತ್ತು ಪಾಕಿಸ್ತಾನವನ್ನು ಯುದ್ಧದ ಅಂಚಿಗೆ ನೂಕಿದೆ.

ಭಾರತದ ವಿರುದ್ಧ ಯುದ್ಧ ಸಾರುವ ಉದ್ದೇಶದಿಂದಲೇ ಜೈಷ್‌–ಎ–ಮೊಹಮ್ಮದ್‌, ಘಾಜ್ವಾ –ಎ–ಹಿಂದ್‌ ಎಂಬ ಸಂಘಟನೆಯನ್ನು ಹುಟ್ಟು ಹಾಕಿದೆ.

ಕಳೆದ 20 ವರ್ಷಗಳ ಅವಧಿಯಲ್ಲಿ ಈ ಉಗ್ರ ಸಂಘಟನೆಗಳು ಭಾರತದಲ್ಲಿ ಅನೇಕ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದೆ. ಪಠಾಣ್‌ಕೋಟ್‌ ವಾಯುನೆಲೆ, ಉರಿ ಸೇನಾ ಪ್ರಧಾನ ಕಚೇರಿ, ಶ್ರೀನಗರದ ಬಾದಾಮಿಬಾಗ್‌ ದಂಡುಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆ ಮೇಲೆ ಬಾಂಬ್‌ ದಾಳಿ ನಡೆಸಿದೆ.

ADVERTISEMENT

2001ರಲ್ಲಿ ಸಂಸತ್‌ ಮೇಲೆ ಜೈಷ್‌–ಎ–ಮೊಹಮ್ಮದ್‌ ದಾಳಿ ನಡೆಸಿದ ಸಂದರ್ಭದಲ್ಲಿ ಭಾರತ– ಪಾಕಿಸ್ತಾನ ಮಧ್ಯೆ ಯುದ್ಧ ಭೀತಿ ಆವರಿಸಿತ್ತು. ಅದಾದ ನಂತರ ಇತ್ತೀಚೆಗೆ ನಡೆದ ಪುಲ್ವಾಮಾ ದಾಳಿ ಬಳಿಕ ಎರಡೂ ರಾಷ್ಟ್ರಗಳ ಮಧ್ಯೆ ಯುದ್ಧದ ಕಾರ್ಮೋಡ ಕವಿದಿತ್ತು.

ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದ ಬಹಾವಲ್ಪುರ್‌ ನಿವಾಸಿಯಾದ ಮಸೂದ್‌ನನ್ನು 1999ರಲ್ಲಿ ಭಾರತದ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು.

ಬಳಿಕ 2000ರಲ್ಲಿ ಆತ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆಯನ್ನು ಹುಟ್ಟು ಹಾಕಿದ್ದ.ಜಾಗತಿಕ ಭಯೋತ್ಪಾದಕ ಒಸಾಮಾ ಬಿನ್‌ ಲಾಡೆನ್‌ ಮತ್ತು ಆತನ ಉಗ್ರ ಸಂಘಟನೆ ಅಲ್‌ ಕೈದಾ ಜತೆ ಜೈಷ್‌ ನಿಕಟ ನಂಟು ಹೊಂದಿತ್ತು.

ಜೈಷ್‌ ಉಗ್ರ ಸಂಘಟನೆ ಭಾರತಕ್ಕೆ ಮಾತ್ರವಲ್ಲ, ಜಾಗತಿಕ ಶಾಂತಿ ಮತ್ತು ಸುರಕ್ಷತೆಗೂ ಅಪಾಯ ತಂದೊಡ್ಡಿದೆ ಎನ್ನುತ್ತಾರೆ ಭಾರತದ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.