ಠಾಣೆ (ಪಿಟಿಐ): ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಕೃತ್ಯವನ್ನು ಕಾಮುಕರು ಎಸಗಿರುವ ಘಟನೆ ಮಹಾರಾಷ್ಟ್ರದ ಠಾಣೆ ನಗರದಲ್ಲಿ ವರದಿಯಾಗಿದೆ.
ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಮಹಿಳೆಯನ್ನು ಸೀಮೆ ಎಣ್ಣೆ ಸುರಿದು ಜೀವಂತವಾಗಿ ಸುಡಲಾಗಿದ್ದರೆ ಮತ್ತೊಂದು ಘಟನೆಯಲ್ಲಿ ವೇಶ್ಯಾವಾಟಿಕೆಗೆ ಒಲ್ಲೆ ಎಂದ ಯುವತಿಯ ಎರಡೂ ಸ್ತನಗಳನ್ನು ದುರುಳರು ಕತ್ತರಿಸಿದ ಅಮಾನವೀಯ ಘಟನೆ ನಡೆದಿದೆ.
ಠಾಣೆಯ ಅಭಿತ್‌ಘರ್ ಎಂಬಲ್ಲಿಯ 30 ವರ್ಷದ ಮಹಿಳೆ ಕಾಮುಕನ ಕೃತ್ಯಕ್ಕೆ ಬಲಿಯಾದವಳು.
ಈಕೆಯ ಪತಿ ಕೆಲಸ ಮಾಡುತ್ತಿದ್ದ ಸ್ಟೀಲ್ ಕಂಪೆನಿಯ ಗುತ್ತಿಗೆದಾರ, ಲಖನ್ ಯಾದವ್ ಎಂಬಾತನೇ ಈ ಹೀನ ಕೃತ್ಯ ಎಸಗಿದಾತ.
‘ಶುಕ್ರವಾರ ರಾತ್ರಿ ಮನೆಯಲ್ಲಿ ಮಹಿಳೆ ಒಬ್ಬಳೇ ಇದ್ದ ಸಮಯವನ್ನು ನೋಡಿ ಲಖನ್ ಮನೆಗೆ ನುಗ್ಗಿದ್ದು ಸರಸವಾಡಲು ಕರೆದಿದ್ದಾನೆ. ಆದರೆ ಇದಕ್ಕೆ ನಿರಾಕರಿಸಿದ ಅವಳಿಗೆ ಬೆದರಿಕೆ ಹಾಕಿ, ಪಕ್ಕದಲ್ಲಿಯೇ ಇದ್ದ ಸೀಮೆಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿದ್ದಾನೆ’ ಎಂದು ಪೊಲೀಸರು ತಿಳಿಸಿದರು.
ತೀವ್ರ ಸುಟ್ಟ ಗಾಯದಿಂದ ಬಳಲಿದ ಮಹಿಳೆ ಆಸ್ಪತ್ರೆಗೆ ದಾಖಲಿ ಸುವುದರೊಳಗಾಗಿ ಮೃತಪಟ್ಟಿದ್ದಳು, ಆರೋಪಿಯನ್ನು ಬಂಧಿಸಲಾಗಿದೆ.
ಮತ್ತೊಂದು ಪ್ರಕರಣ: ಗುಜರಾತ್‌ನಿಂದ ಮಗ್ಗಗಳ ಪಟ್ಟಣ ಭಿವಂಡಿಯ ವೇಶ್ಯಾಗೃಹಕ್ಕೆ ಮಾರಾಟ ವಾಗಿದ್ದ 24 ವರ್ಷದ ಯುವತಿ ಕಾಮಕೂಟಕ್ಕೆ ನಿರಾಕರಿಸಿದಾಗ ಮೂವರು ದುರುಳರು ಸೇರಿಕೊಂಡು ಆಕೆಯ ಸ್ತನಗಳನ್ನೇ ಕತ್ತರಿಸಿ ಹಾಕಿದ್ದಾರೆ ಎಂದು ಕುಂಬಾರವಾಡಾ ಭಿವಂಡಿ ನಗರ ಪೊಲಿಸರು ತಿಳಿಸಿದ್ದಾರೆ.
ಗಿರಾಕಿಗಳೊಂದಿಗೆ ಸರಸಕ್ಕೆ ತೆರಳಲು ವೇಶ್ಯಾಗೃಹದ ಒಡತಿ ರೂಬಿ ಎಂಬಾಕೆ ಆದೇಶಿಸಿದರೂ ಅದನ್ನು ಯುವತಿ ಪಾಲಿಸಲಿಲ್ಲ ಎನ್ನಲಾಗಿದೆ. ಇದರಿಂದ ಕುಪಿತಗೊಂಡ ವೇಶ್ಯಾಗೃಹದ ಕಾವಲುಗಾರ ಮತ್ತಿತರ ಇಬ್ಬರು ಆಕೆಯ ಸ್ತನಗಳನ್ನೇ ಕತ್ತರಿಸಿ ಹಲ್ಲುಗಳನ್ನು ಮುರಿದಿದ್ದಾರೆ.
ಘಟನೆಯ ನಂತರ ಕೆಲವರು ಯುವತಿಯನ್ನು ರಕ್ಷಿಸಿದ್ದು ಭಿವಂಡಿಯ ಐಜಿಎಂ ಆಸ್ಪತ್ರೆಗೆ ಸೇರಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಯುವತಿಯನ್ನು ಠಾಣೆ ಜಿಲ್ಲಾ ಆಸ್ಪತ್ರೆಗೆ ಸೇರಿಸ ಲಾಗಿದೆ. ಆಕೆ ಸದ್ಯ ಮಾತನಾಡುವ ಸ್ಥಿತಿಯಲ್ಲಿ ಇಲ್ಲ.ರೂಬಿ ಹಾಗೂ ವೇಶ್ಯಾಗೃಹ ಕಾವಲುಗಾರನ್ನು ಶನಿವಾರ ಬಂಧಿಸಲಾಗಿದ್ದು 25ರತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.