ADVERTISEMENT

ಸರ್ಕಾರದ ವಿರುದ್ಧ ಹುನ್ನಾರ: ಆರೋಪ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 19:30 IST
Last Updated 6 ಸೆಪ್ಟೆಂಬರ್ 2011, 19:30 IST

ನವದೆಹಲಿ: ರಾಜ್ಯದ ನೂತನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ಸರ್ಕಾರವನ್ನು ಅಸ್ಥಿರಗೊಳಿಸಲು ಪಕ್ಷದೊಳಗೆ ಕೆಲ ಶಕ್ತಿಗಳು ಪ್ರಯತ್ನ ನಡೆಸುತ್ತಿವೆ ಎಂದು ವಿಜಾಪುರ ಲೋಕಸಭಾ ಸದಸ್ಯ ರಮೇಶ್ ಜಿಗಜಿಣಗಿ ಆರೋಪಿಸಿದ್ದಾರೆ.

ಸದಾನಂದಗೌಡರ ಕಾರ್ಯಶೈಲಿ, ದೃಢ ಹೆಜ್ಜೆ ಹಾಗೂ ದಕ್ಷತೆ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಆದರೆ, ರಾಜ್ಯದಲ್ಲಿ ಪಕ್ಷ ಮತ್ತು ಹೆಚ್ಚು ದಿನ ಉಳಿಯಲಾರದು ಎಂಬ ಕುಯುಕ್ತಿಯಿಂದ ಕೆಲವು ಶಕ್ತಿಗಳು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದು, ಈ ಶಕ್ತಿಗಳು ಬೆಳೆಯಲು ಬಿಡಬಾರದು ಎಂದು ಜಿಗಜಿಣಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಕಷ್ಟದ ದಿನಗಳು ನಿವಾರಣೆ ಆಗಿವೆ. ಮುಖ್ಯಮಂತ್ರಿ ಮತ್ತು ಪಕ್ಷದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರ ನಡುವೆ ಉತ್ತಮ ಹೊಂದಾಣಿಕೆ ಇದೆ. ಇದರಿಂದ ಪಕ್ಷ ಮತ್ತಷ್ಟು ಬಲಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಡು ವೈರಿಯಾಗಿರುವ ಜಿಗಜಿಣಗಿ ಪಕ್ಷ, ಸರ್ಕಾರ ಹಾಗೂ ಕಾರ್ಯಕರ್ತರ ಹಿತದೃಷ್ಟಿಯಿಂದ, ರಾಜ್ಯ ಬಿಜೆಪಿ ನಾಯಕರು ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಬೇಕು ಎಂದು ಕಿವಿಮಾತು ಹೇಳಿದ್ದಾರೆ. ಜನ ಬಿಜೆಪಿ ಬಗೆಗೆ ಒಲವು ಹೊಂದಿದ್ದಾರೆ.

ಈ ಕಾರಣಕ್ಕೆ ಪಕ್ಷದ ನಾಯಕರು ತಮ್ಮ ಪ್ರತಿಷ್ಠೆ ಬದಿಗೊತ್ತಬೇಕು. ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸತ್ಯ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದ್ದಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.