ADVERTISEMENT

ಸರ್ಕಾರದ ವೈಫಲ್ಯಕ್ಕೆ `ಸುಪ್ರೀಂ' ತರಾಟೆ

ಆಸಿಡ್ ಮಾರಾಟ ನಿರ್ಬಂಧ ನೀತಿ

​ಪ್ರಜಾವಾಣಿ ವಾರ್ತೆ
Published 9 ಜುಲೈ 2013, 19:59 IST
Last Updated 9 ಜುಲೈ 2013, 19:59 IST

ನವದೆಹಲಿ (ಪಿಟಿಐ): ಆಸಿಡ್ ದಾಳಿ ತಡೆಯುವ ಉದ್ದೇಶದ ಆಸಿಡ್ ಮಾರಾಟ ನಿರ್ಬಂಧ ನೀತಿಯನ್ನು ರೂಪಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.

ಏಪ್ರಿಲ್ 16ರಂದು ನಡೆದ ವಿಚಾರಣೆ ಸಂದರ್ಭದಲ್ಲಿ ಆಸಿಡ್ ಮಾರಾಟ ನಿರ್ಬಂಧ ನೀತಿ ರೂಪಿಸುವ ಭರವಸೆ ನೀಡಿದ್ದ ಕೇಂದ್ರ ಸರ್ಕಾರ, ಈ ನಿಟ್ಟಿನಲ್ಲಿ ವಿಫಲವಾಗಿದೆ. ಪ್ರತಿದಿನ ಆಸಿಡ್ ದಾಳಿಯಿಂದ ಸಾವು ನೋವುಗಳ  ವರದಿಗಳು ಬರುತ್ತಲೇ ಇವೆ ಎಂದು ನ್ಯಾಯಮೂರ್ತಿ ಆರ್. ಎಂ. ಲೋಧಾ ನೇತೃತ್ವದ ನ್ಯಾಯಪೀಠವು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಆಸಿಡ್ ದಾಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿಯೇ ಇಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಪೀಠವು, ರಾಜ್ಯ ಸರ್ಕಾರಗಳ ಸಲಹೆ ಪಡೆದು ನೀತಿ ರೂಪಿಸಲು ಅಂತಿಮವಾಗಿ ಒಂದು ವಾರದ ಸಮಯಾವಕಾಶ ನೀಡಿತು. ಈ ಅಂತಿಮ ಗಡುವು ಪಾಲಿಸದಿದ್ದಲ್ಲಿ ಜುಲೈ 16ರಂದು ಆದೇಶ ಹೊರಡಿಸುವುದು ಅನಿವಾರ್ಯವಾಗುತ್ತದೆ ಎಂದು ನ್ಯಾಯಪೀಠವು ಸರ್ಕಾರಕ್ಕೆ ಎಚ್ಚರಿಕೆ ನೀಡಿದೆ.

ಕಳೆದ ಫೆಬ್ರುವರಿ 6ರಂದು ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳ ಸಭೆ ನಡೆಸಿ ಆಸಿಡ್ ಮಾರಾಟ ನಿಯಂತ್ರಣ, ದಾಳಿಗೆ ಒಳಗಾದ ಸಂತ್ರಸ್ತರ ಪುನರ್ವಸತಿ ಹಾಗೂ ಪರಿಹಾರ ನೀಡಿಕೆಯ ಬಗ್ಗೆ ಒಂದು ಹೊಸ ನೀತಿ ರೂಪಿಸುವಂತೆ ಸೂಚಿಸಿತ್ತು.

ಆಸಿಡ್ ದಾಳಿಗೆ ಒಳಗಾದ ದೆಹಲಿ ಮೂಲದ ಲಕ್ಷ್ಮಿ ಎಂಬುವರು 2006ರಲ್ಲಿ ಆಸಿಡ್ ಮಾರಾಟ ನಿಷೇಧಿಸಬೇಕು ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಲಕ್ಷ್ಮಿ ಬಾಲಕಿಯಾಗಿದ್ದಾಗ ನಡೆದ ಆಸಿಡ್ ದಾಳಿಯಲ್ಲಿ  ಕೈ, ಮುಖ ಮತ್ತು ದೇಹದ ಇತರ ಭಾಗಗಳು ವಿರೂಪಗೊಂಡಿವೆ.
ಆಸಿಡ್ ದಾಳಿಗೆ ಒಳಗಾದವರಿಗೆ ಸೂಕ್ತ ನ್ಯಾಯ ಹಾಗೂ ಪರಿಹಾರ ಒದಗಿಸಲು ಐಪಿಸಿ, ಅಪರಾಧ ಸಂಹಿತೆ, ಭಾರತೀಯ ಸಾಕ್ಷ್ಯ ಕಾಯ್ದೆಗಳಿಗೆ ತಿದ್ದುಪಡಿ ತರಬೇಕು ಇಲ್ಲವೇ ಹೊಸ ಕಾನೂನನ್ನು ಜಾರಿಗೆ ತರಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.