ADVERTISEMENT

ಸಲಿಂಗಕಾಮ ಕ್ರಿಮಿನಲ್ ಅಪರಾಧ: ಸುಪ್ರೀಂ ತೀರ್ಪು

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 10:53 IST
Last Updated 11 ಡಿಸೆಂಬರ್ 2013, 10:53 IST

ನವದೆಹಲಿ (ಪಿಟಿಐ): ಸಲಿಂಗಕಾಮ ಅಪರಾಧವಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್ 2009ರಲ್ಲಿ ನೀಡಿದ್ದ ತೀರ್ಪನ್ನು ಬುಧವಾರ ರದ್ದು ಪಡಿಸಿದ ಸುಪ್ರೀಂಕೋರ್ಟ್ ಭಾರತೀಯ ದಂಡ ಸಂಹಿತೆಯ 377ನೇ ವಿಧಿಯನ್ನು ಬದಲಾಯಿಸಲು ಸಂವಿಧಾನದಲ್ಲಿ ಅವಕಾಶ ಇಲ್ಲ ಎಂದು ಸಾರಿತು.

ನ್ಯಾಯಮೂರ್ತಿ ಜಿ.ಎಸ್. ಸಿಂಘ್ವಿ ಮತ್ತು ನ್ಯಾಯಮೂರ್ತಿ ಎಸ್. ಜೆ. ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠವು ಸಲಿಂಗ ಕಾಮವನ್ನು ಕ್ರಿಮಿನಲ್ ಅಪರಾಧ ಎಂಬುದಾಗಿ ಪರಿಗಣಿಸಿ ಜೀವಾವಧಿ ಸಜೆವರೆಗಿನ ಶಿಕ್ಷೆಗೆ ಗುರಿಪಡಿಸಬಹುದಾದ ಭಾರತೀಯ ದಂಡ ಸಂಹಿತೆಯ ವಿಧಿಯ ಸಿಂಧುತ್ವವನ್ನು ಎತ್ತಿ ಹಿಡಿಯುವ ಮೂಲಕ ಸಲಿಕಾಮ ಪರ ಚಳವಳಿಕಾರರಿಗೆ ಭಾರಿ ಹೊಡೆತ ನೀಡಿತು.

ಪ್ರಾಪ್ತ ವಯಸ್ಕರು ಪರಸ್ಪರ ಸಮ್ಮತಿಯೊಂದಿಗೆ ಖಾಸಗಿಯಾಗಿ ನಡೆಸುವ ಸಲಿಂಗಕಾಮ ಅಪರಾಧವಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್ 2009ರ ಜುಲೈ 2ರಂದು ನೀಡಿದ್ದ ತೀರ್ಪನ್ನು ಪೀಠವು ಅನೂರ್ಜಿತಗೊಳಿಸಿತು.

ಸಲಿಂಗಕಾಮವು ರಾಷ್ಟ್ರದ ಸಾಂಸ್ಕೃತಿಕ ಮತ್ತು ಧಾರ್ಮಿಕ ಮೌಲ್ಯಗಳಿಗೆ ವಿರುದ್ಧವಾದುದು ಎಂಬ ನೆಲೆಯಲ್ಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ವಿವಿಧ ಸಾಮಾಜಿಕ ಹಾಗೂ ಧಾರ್ಮಿಕ ಸಂಘಟನೆಗಳು ಸಲ್ಲಿಸಿದ್ದ ಮೇಲ್ಮನವಿಗಳನ್ನು ಪೀಠವು ಅಂಗೀಕರಿಸಿತು.

ಏನಿದ್ದರೂ ವಿಷಯಕ್ಕೆ ಸಂಬಂಧಿಸಿದಂತೆ ಚರ್ಚಿಸಿ ನಿರ್ಧರಿಸುವುದು ಶಾಸಕಾಂಗಕ್ಕೆ ಬಿಟ್ಟ ವಿಚಾರ ಎಂಬುದಾಗಿ ಹೇಳುವ ಮೂಲಕ ಪೀಠವು ವಿವಾದಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ವಿಚಾರವನ್ನು ಸಂಸತ್ತಿನ ಅಂಗಣಕ್ಕೆ ರವಾನಿಸಿತು.

ಸುಪ್ರೀಂಕೋರ್ಟ್ ತೀರ್ಪಿನೊಂದಿಗೆ ಸಲಿಂಗಕಾಮದ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳುವ ಭಾರತೀಯ ದಂಡ ಸಂಹಿತೆಯ ವಿಧಿ ಮತ್ತು ಜೀವ ಪಡೆಯಿತು.

ಸುಪ್ರೀಂಕೋರ್ಟ್ ತೀರ್ಪು ನ್ಯಾಯಾಲಯದಲ್ಲಿ ಹಾಜರಿದ್ದ ಸಲಿಂಗಕಾಮ ಪರ ಚಳವಳಿಗಾರರಿಗೆ ಭಾರಿ ಆಘಾತವನ್ನು ಉಂಟು ಮಾಡಿತು.

'ಸುಪ್ರೀಂಕೋರ್ಟ್ ತೀರ್ಪಿನಿಂದಾಗಿ ನಮ್ಮ ಪರಿಸ್ಥಿತಿ ಮತ್ತೆ ಹಿಂದಿನ ದುಃಸ್ಥಿತಿಗೇ ಹಿಂತಿರುಗಿದಂತಾಗಿದೆ' ಎಂದು ಭ್ರಮನಿರಸನ ವ್ಯಕ್ತ ಪಡಿಸಿರುವ ಸಲಿಂಗ ಕಾಮಿ ಹಾಗೂ ಲೈಂಗಿಕ ಅಲ್ಪಸಂಖ್ಯಾತ ಸಮದಾಯದ ಕಾರ್ಯಕರ್ತರು ಆದರೂ ಹೋರಾಟ ಮುಂದುವರೆಸುತ್ತೇವೆ. ತೀರ್ಪಿನ ಪುನರ್ ಪರಿಶೀಲನೆಗೆ ಮನವಿ ಸಲ್ಲಿಸುತ್ತೇವೆ ಎಂದು ಹೇಳಿದರು.

ಈ ಮಧ್ಯೆ ವಿಷಯಕ್ಕೆ ಸಂಬಂಧಿಸಿದಂತೆ ಶಾಸಕಾಂಗ ಮಾರ್ಗದಲ್ಲಿ ಸಾಗುವ ಬಗ್ಗೆ ಸರ್ಕಾರ ಸುಳಿವು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.