ನವದೆಹಲಿ (ಐಎಎನ್‌ಎಸ್): ವಿವಾದಾತ್ಮಕ ಲೇಖಕ ಸಲ್ಮಾನ್ ರಶ್ದಿ ಭಾಗವಹಿಸಲಿದ್ದಾರೆ ಎಂಬ ಕಾರಣಕ್ಕೆ `ಇಂಡಿಯಾ ಟುಡೆ~ ಸಮಾವೇಶದಲ್ಲಿ ಶನಿವಾರ ರಾತ್ರಿ ಭಾಷಣ ಮಾಡಬೇಕಿದ್ದ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ಪಾಕ್ ರಾಜಕಾರಣಿ ಇಮ್ರಾನ್ ಖಾನ್ ಪಾಲ್ಗೊಳ್ಳದೆ ದೂರ ಉಳಿದರು.
ರಶ್ದಿ ಅವರ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನದ ತೆಹರೀಕ್-ಎ-ಇನ್ಸಾಫ್ ಮುಖ್ಯಸ್ಥ ಇಮ್ರಾನ್ ಖಾನ್ ನೇರವಾಗಿ ಹೇಳಿದ್ದಾರೆ. ಉಳಿದ ಗಣ್ಯರು ಬೇರೆ ಬೇರೆ ಕಾರಣಗಳನ್ನು ನೀಡಿ ನುಣುಚಿಕೊಂಡಿದ್ದಾರೆ.
ಪಶ್ಚಿಮ ಬಂಗಾಳದ ತಮ್ಮ ಕ್ಷೇತ್ರ ಜಾಂಗಿಪುರದ ಜನತೆಯಿಂದ ಒತ್ತಡ ಇರುವುದರಿಂದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗದು ಎಂದು ಪ್ರಣವ್ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಮುಸ್ಲಿಮರು ಅಧಿಕವಾಗಿದ್ದಾರೆ.
ರಾಜಧಾನಿಯ ತಾಜ್ ಪ್ಯಾಲೇಸ್ ಹೋಟೆಲ್‌ನಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ಈ ಸಮಾವೇಶದಲ್ಲಿ ರಶ್ದಿ ಶುಕ್ರವಾರವೇ ಸಾಹಿತ್ಯ ಭಾಷಣ ಮಾಡಬೇಕಿತ್ತು. ಆದರೆ ಇಮ್ರಾನ್ ಖಾನ್ ಕಾರ್ಯಕ್ರಮದಿಂದ ದೂರ ಉಳಿದಿದ್ದರಿಂದ ಅದನ್ನು ಶನಿವಾರ ರಾತ್ರಿಗೆ ಮುಂದೂಡಲಾಗಿತ್ತು.
`ವಿಚಾರಗಳನ್ನು ಮುಕ್ತ ಮತ್ತು ಆಪ್ತವಾಗಿ ವಿನಿಮಯ ಮಾಡಿಕೊಳ್ಳುವುದು ನಮ್ಮ ಸಮಾವೇಶದ ಉದ್ದೇಶ, ಆದರೆ ಇಮ್ರಾನ್ ಖಾನ್ ಅವರು ರಶ್ದಿ ಬರುತ್ತಾರೆ ಎಂಬ ಕಾರಣಕ್ಕೆ ಬಾರದಿರುವುದು ವಿಷಾದದ ಸಂಗತಿ~ ಎಂದು ಇಂಡಿಯಾ ಟುಡೆ ಸಮೂಹದ ಅಧ್ಯಕ್ಷ ಅರುಣ್ ಪುರಿ ಹೇಳಿದ್ದಾರೆ.
ರಶ್ದಿ ತಮ್ಮ `ಸಟಾನಿಕ್ ವರ್ಸಸ್~ ಕೃತಿಯಲ್ಲಿ ಮಾಡಿರುವ ಧಾರ್ಮಿಕ ಪ್ರಸ್ತಾವಗಳನ್ನು ತೀವ್ರವಾದಿ ಮುಸ್ಲಿಮರು ವಿರೋಧಿಸಿದ್ದರಿಂದ ಎರಡು ತಿಂಗಳ ಹಿಂದೆ ಜೈಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕೂಡ ರಶ್ದಿ ಭಾಗವಹಿಸಿರಲಿಲ್ಲ.
`ಸಮಾವೇಶದಲ್ಲಿ ಮಾತನಾಡಲು ಕಾತರನಾಗಿದ್ದೇನೆ, ನನ್ನ ಭಾಷಣ ಇಂಡಿಯಾ ಟುಡೆ ಕಾನ್‌ಕ್ಲೇವ್ ಡಾಟ್ ಕಾಂನಲ್ಲಿ ನೇರ ಪ್ರಸಾರವಾಗಲಿದೆ~ ಎಂದು ರಶ್ದಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.