ADVERTISEMENT

ಸಹಜ ಸ್ಥಿತಿಯತ್ತ ಮುಂಬೈ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 19:30 IST
Last Updated 19 ನವೆಂಬರ್ 2012, 19:30 IST

ಮುಂಬೈ (ಐಎಎನ್‌ಎಸ್): ಶಿವಸೇನಾ ಮುಖಂಡ ಬಾಳ ಠಾಕ್ರೆ ಅಂತ್ಯಕ್ರಿಯೆ ಬಳಿಕ ಮುಂಬೈ  ನಿಧಾನವಾಗಿ ಸೋಮವಾರ ಸಹಜ ಸ್ಥಿತಿಗೆ ಮರಳಿದೆ. ಅಂಗಡಿಗಳು ತೆರೆದಿದ್ದವು. ಆಟೊ, ಟ್ಯಾಕ್ಸಿಗಳ ಸಂಚಾರ ಎಂದಿನಂತೆ ಇತ್ತು.  ದೀಪಾವಳಿ ಹಬ್ಬದ ಪ್ರಯುಕ್ತ ರಜೆ ಘೋಷಿಸಲಾಗಿದ್ದ ಶಾಲಾ-ಕಾಲೇಜುಗಳು ಎಂದಿನಂತೆ ತೆರೆದಿದ್ದವು.

 ಠಾಕ್ರೆ ಗೌರವಾರ್ಥವಾಗಿ ಮಹಾರಾಷ್ಟ್ರ ಅಸೋಸಿಯೇಶನ್‌ಗಳ ಒಕ್ಕೂಟ (ಎಫ್‌ಎಎಂ) ತನ್ನ ಸದಸ್ಯರಿಗೆ ಹಾಗೂ ವ್ಯಾಪಾರಿ ಸಮುದಾಯದವರಿಗೆ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಸೂಚಿಸಿತ್ತು. ಸೋಮವಾರವನ್ನು ಒಕ್ಕೂಟ ಶ್ರದ್ಧಾಂಜಲಿ ದಿನವನ್ನಾಗಿ ಆಚರಿಸಿತು.

ವಿವಿಧೆಡೆ ಚಿತಾಭಸ್ಮ ವಿಸರ್ಜನೆ: ಠಾಕ್ರೆ ಪುತ್ರ ಉದ್ಧವ್ ಠಾಕ್ರೆ ಇಲ್ಲಿನ ಶಿವಾಜಿ ಪಾರ್ಕ್‌ಗೆ ತೆರಳಿ ಸಾವಿರಾರು ಜನರ ಸಮ್ಮುಖದಲ್ಲಿ ಬಾಳ ಠಾಕ್ರೆ ಅವರ ಚಿತಾಭಸ್ಮವನ್ನು ಸಂಗ್ರಹಿಸಿದರು.

ಚಿತಾಭಸ್ಮದ ಅಲ್ಪ ಭಾಗವನ್ನು ಶಿವಸೇನಾ ಪ್ರಧಾನ ಕಚೇರಿಗೆ ಒಯ್ಯಲಿದ್ದು,  ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲಾಗದಿದ್ದವರು  ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗುವುದು. ಉಳಿದ ಚಿತಾಭಸ್ಮವನ್ನು `ಮಾತ್ರೋಶ್ರೀ~ಗೆ ಒಯ್ಯಲಾಗುವುದು~ ಎಂದು ಮೂಲಗಳು ತಿಳಿಸಿವೆ.

ಎರಡು ದಿನಗಳ ಬಳಿಕ ಪುಣ್ಯಕ್ಷೇತ್ರಗಳಾದ ಹರಿಹರೇಶ್ವರ, ಹರಿದ್ವಾರ, ನಾಸಿಕ್, ವಾರಾಣಸಿ ಹಾಗೂ ಕನ್ಯಾಕುಮಾರಿಗಳಲ್ಲಿ ಅಸ್ಥಿಯನ್ನು ವಿಸರ್ಜಿಸಲಾಗುವುದು.

ಠಾಕ್ರೆ ಸ್ಮಾರಕ: ಶಿವಾಜಿ ಪಾರ್ಕ್‌ನಲ್ಲಿ ಬಾಳ ಠಾಕ್ರೆ ಅವರ ಸ್ಮಾರಕ ನಿರ್ಮಿಸಬೇಕೆಂದು ಶಿವಸೇನೆಯ ಹಿರಿಯ ಮುಖಂಡ  ಮನೋಹರ್ ಜೋಶಿ ಬೇಡಿಕೆ ಇಟ್ಟಿದ್ದಾರೆ.

13ರ ಮಹಿಮೆ: ಅನೇಕರು ಸಂಖ್ಯೆ 13ನ್ನು ದುರದೃಷ್ಟ ಎಂದು ಭಾವಿಸುತ್ತಾರೆ ಆದರೆ ಅದು ಬಾಳ ಠಾಕ್ರೆಯವರಿಗೆ ನೆಚ್ಚಿನ ಸಂಖ್ಯೆಯಾಗಿತ್ತು. ಠಾಕ್ರೆ ಅವರಿಗೆ ಸಂಖ್ಯಾಶಾಸ್ತ್ರದಲ್ಲಿ ನಂಬಿಕೆ ಇರಲಿಲ್ಲ ಆದರೂ ಕಾಕತಾಳೀಯವೆಂಬಂತೆ ಕೆಲವು ಘಟನೆಗಳು ಅವರ ಜೀವನದಲ್ಲಿ ಘಟಿಸಿವೆ.
 
ಠಾಕ್ರೆ ಮದುವೆ ಆಗಿದ್ದು 1948ರ ಜೂನ್ 13, `ಮಾರ್ಮಿಕ್~ ಪತ್ರಿಕೆಯಲ್ಲಿ ಅವರ ಕಾರ್ಟೂನ್ ಹೊರಬಂದದ್ದು 1960ರ ಆಗಸ್ಟ್ 13.

-ಇಂತಹ ಅನೇಕ ಅಪರೂಪದ ಮಾಹಿತಿಗಳನ್ನು ಮುಂಬೈನ ಪತ್ರಕರ್ತ ವಿಭವ್ ಪುರಂದರೆ ಅವರು ಠಾಕ್ರೆ ಕುರಿತು ಬರೆದಿರುವ ಪುಸ್ತಕ `ಬಾಳ ಠಾಕ್ರೆ: ರೈಸ್ ಆಫ್ ಶಿವ ಸೇನ~  ಒಳಗೊಂಡಿದ್ದು ಇದು ಶೀಘ್ರದಲ್ಲಿ ಹೊರಬರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.