ADVERTISEMENT

ಸಹೋದ್ಯೋಗಿ ಆರೋಪ ಅಲ್ಲಗಳೆದ ವಿ.ಕೆ.ಸಿಂಗ್

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಚಂಡೀಗಡ (ಪಿಟಿಐ):  ಜನ್ಮ ದಿನಾಂಕ ತಿದ್ದುಪಡಿ ಮಾಡಲು ನಿರಾಕರಿಸಿದ ಒಂದೇ ಕಾರಣಕ್ಕಾಗಿ ತಮ್ಮ ವಿರುದ್ಧ `ವಾರ್ಷಿಕ ಗೋಪ್ಯ ವರದಿ~ ಸಲ್ಲಿಸಿ, ದೊರೆಯಬೇಕಾಗಿದ್ದ ಬಡ್ತಿ ತಡೆದಿದ್ದಾರೆ ಎಂದು ಮೇಜರ್ ಜನರಲ್ ಟಿ.ಎಸ್.ಹಂಡಾ ಅವರು ತಮ್ಮ ವಿರುದ್ಧ ಮಾಡಿರುವ ಆರೋಪವನ್ನು ವಿವಾದಿತ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಹಂಡಾ ಆರೋಪಗಳಿಗೆ ನೀಡಿದ ಲಿಖಿತ ಉತ್ತರಗಳನ್ನು ಸಿಂಗ್ ಅವರು ಸೇನಾ ನ್ಯಾಯಮಂಡಳಿಗೆ (ಎಎಫ್‌ಟಿ) ಸಲ್ಲಿಸಿದ್ದು, ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನೂ ತಳ್ಳಿಹಾಕಿದ್ದಾರೆ. ಸಿಂಗ್ ಅವರ ವಿರುದ್ಧ ಸೇನಾ ನ್ಯಾಯಮಂಡಳಿಗೆ ಮೇಜರ್ ಜನರಲ್ ಹಂಡಾ ಕಳೆದ ಏಪ್ರಿಲ್‌ನಲ್ಲಿ ದೂರು ನೀಡಿದ್ದರು.

ಇದಕ್ಕೆ ಉತ್ತರಿಸಿರುವ ಸಿಂಗ್, ಹಂಡಾ ಅವರ ಸೇವೆ, ಕಾರ್ಯಕ್ಷಮತೆ, ದಕ್ಷತೆಯ ಆಧಾರದ ಮೇಲೆ ವಾರ್ಷಿಕ ಗೋಪ್ಯ ವರದಿ ಸಿದ್ಧಪಡಿಸಲಾಗಿದೆ  ಹೊರತು ಇನ್ಯಾವುದೇ ಮೂಲಗಳ ಮಾಹಿತಿ ಸಂಗ್ರಹಿಸಿ ತಯಾರಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.
 
ವರದಿ ಸಿದ್ಧಪಡಿಸಲು ಹಂಡಾ ಅವರಿಗಿಂತ ಕೆಳಗಿನ ಅಧಿಕಾರಿಗಳ ಮೇಲೆ ತಾವು ಒತ್ತಡವನ್ನೂ ಹೇರಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಪ್ರಕರಣದ ವಿಚಾರಣೆಯನ್ನು ಸೇನಾ ನ್ಯಾಯಮಂಡಳಿ ಮಾರ್ಚ್ 1ಕ್ಕೆ ಮುಂದೂಡಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.