ADVERTISEMENT

ಸಾಂವಿಧಾನಿಕ ಸಂಸ್ಥೆಗಳು ನಾಶ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಾಗ್ದಾಳಿ

ಪಿಟಿಐ
Published 23 ಏಪ್ರಿಲ್ 2018, 19:57 IST
Last Updated 23 ಏಪ್ರಿಲ್ 2018, 19:57 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ : ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಸಿದ್ಧಾಂತದ ವ್ಯಕ್ತಿಗಳನ್ನು ಪ್ರಮುಖ ಸಾಂವಿಧಾನಿಕ ಹುದ್ದೆಗಳಿಗೆ ನೇಮಕ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ದೇಶದ ಪ್ರಮುಖ ಸಾಂವಿಧಾನಿಕ ಸಂಸ್ಥೆಗಳ ಪಾವಿತ್ರ್ಯ ನಾಶ ಮಾಡಲು ಹೊರಟಿದೆ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆರೋಪಿಸಿದ್ದಾರೆ.

ಸುಪ್ರೀಂ ಕೋರ್ಟ್ ಮತ್ತು ಸಂಸತ್‌ನಂತಹ ಅತ್ಯುನ್ನತ ಸಾಂವಿಧಾನಿಕ ಸಂಸ್ಥೆಗಳನ್ನು ಮೋದಿ ಸರ್ಕಾರ ದುರ್ಬಳಕೆ ಮಾಡಿಕೊಂಡಿದೆ ಎಂದು ಅವರು ಹರಿಹಾಯ್ದಿದ್ದಾರೆ.

ಕಾಂಗ್ರೆಸ್‌ ದೇಶದಾದ್ಯಂತ ಹಮ್ಮಿಕೊಂಡಿರುವ ‘ಸಂವಿಧಾನ ಉಳಿಸಿ’ ಆಂದೋಲನಕ್ಕೆ ಸೋಮವಾರ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

ದೇಶದ ನ್ಯಾಯಾಂಗ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯೊಬ್ಬರ ವಿರುದ್ಧ ಬಂಡಾಯ ಎದ್ದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ನ್ಯಾಯ ಕೋರಿ ಜನತಾ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದರು.

‘ಲೋಕಸಭೆಯಲ್ಲಿ ಮಾತನಾಡಲು ಕೇವಲ 15 ನಿಮಿಷ ಅವಕಾಶ ನೀಡಿದರೆ ಪ್ರಧಾನಿ ಮೋದಿ ಅವರ ಬೆವರಿಳಿಸುತ್ತೇನೆ. ರಫೇಲ್‌ ಯುದ್ಧ ವಿಮಾನ, ನೀರವ್‌ ಮೋದಿ, ಲಲಿತ್‌ ಮೋದಿ, ವಿಜಯ್‌ ಮಲ್ಯ ಅವರ ಬಗ್ಗೆ ಮಾತನಾಡಲು ಆರಂಭಿಸಿದರೆ ಮೋದಿ ಸಂಸತ್‌ನಲ್ಲಿ ನಿಲ್ಲುವುದಿಲ್ಲ’ ಎಂದು ರಾಹುಲ್‌ ಸವಾಲು ಹಾಕಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರು ಮೋದಿ ವಿರುದ್ಧ ಮತ ಚಲಾಯಿಸುವ ಮೂಲಕ ತಮ್ಮ ‘ಮನದ ಮಾತ’ನ್ನು ಅವರಿಗೆ ತಿಳಿಸಬೇಕು ಎಂದು ಅವರು ಸಲಹೆ ಮಾಡಿದರು.

ದೌರ್ಜನ್ಯಗಳ ಬಗ್ಗೆ ಬಾಯಿ ಬಿಡಿ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ವರ್ಚಸ್ಸನ್ನು ಹಾಳು ಮಾಡಿದ್ದಾರೆ. ದೇಶದ ಬಗ್ಗೆ, ಇಲ್ಲಿಯ ಜನರ ಬಗ್ಗೆ ಅವರಿಗೆ ಕಾಳಜಿ ಇಲ್ಲ. ತಮ್ಮ ವರ್ಚಸ್ಸು ಮತ್ತು ಚುನಾವಣೆ ಗೆಲ್ಲುವ ಬಗ್ಗೆ ಮಾತ್ರ ಅವರಿಗೆ ಕಾಳಜಿ ಇದೆ ಎಂದು ರಾಹುಲ್‌ ತರಾಟೆಗೆ ತೆಗೆದುಕೊಂಡರು.

ದಲಿತರು, ಮಹಿಳೆಯರು, ಅಲ್ಪಸಂಖ್ಯಾತರ ಮೇಲೆ ದೇಶದಲ್ಲಿ ಪ್ರತಿನಿತ್ಯ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆ. ಮುಗ್ಧ ಮಕ್ಕಳ ಮೇಲೆ ಹೆಚ್ಚುತ್ತಿರುವ ಅತ್ಯಾಚಾರ ಘಟನೆಗಳ ಬಗ್ಗೆ ಅವರು ಇದುವರೆಗೂ ತುಟಿ ಬಿಚ್ಚಿಲ್ಲ ಎಂದು ರಾಹುಲ್‌ ಆರೋಪಿಸಿದರು.
**
ಅಮಿತ್‌ ಶಾ ತಿರುಗೇಟು
ಗಾಂಧಿ–ನೆಹರೂ ಕುಟುಂಬಕ್ಕೆ ವಿಧೇಯರಾಗಿರದ ಸಂಸ್ಥೆಗಳನ್ನು ದುರ್ಬಲಗೊಳಿಸುವ ಯತ್ನದ ಭಾಗವಾಗಿ ವಾಗ್ದಂಡನೆ ಪ್ರಹಸನ ನಡೆದಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.