ADVERTISEMENT

ಸಾಮೂಹಿಕ ಅತ್ಯಾಚಾರ: ನಾಲ್ವರಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2014, 10:41 IST
Last Updated 21 ಮಾರ್ಚ್ 2014, 10:41 IST

ಮುಂಬೈ(ಪಿಟಿಐ): ರಾಷ್ಟ್ರದಾದ್ಯಂತ ವ್ಯಾಪಕ ಚರ್ಚೆ, ಪ್ರತಿರೋಧಕ್ಕೆ ಗುರಿಯಾಗಿದ್ದ ಮುಂಬೈನ ಶಕ್ತಿ ಮಿಲ್ ಆವರಣದಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಇಬ್ಬರು ಮಹಿಳೆಯರ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರಾಗಿದ್ದ ಐವರಲ್ಲಿ ನಾಲ್ವರಿಗೆ ಪ್ರಧಾನ ಸೆಷನ್ಸ್ ಕೋರ್ಟ್ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿತು.

ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೋರ್ಟ್‌, ಅತ್ಯಾಚಾರವನ್ನು ಅತ್ಯಂತ ಕ್ರೂರ ಮತ್ತು ಅಮಾನವೀಯ ಕೃತ್ಯ ಎಂದು ಹೇಳಿತು.

‘ಟೆಲಿಪೊನ್ ಆಪರೇಟರ್’ ಅತ್ಯಾಚಾರ ಪ್ರಕರಣದಲ್ಲಿ ಮಹಮದ್ ಆಶ್ಫಾಕ್ ಶೇಖ್ (26) ಹಾಗೂ ಛಾಯಾಗ್ರಾಹಕಿ ಅತ್ಯಾಚಾರ ಪ್ರಕರಣಗಳೆರಡರಲ್ಲೂ ಭಾಗಿಯಾಗಿದ್ದ ವಿಜಯ್ ಜಾದವ್(19), ಮಹಮದ್ ಖಾಸಿಂ ಶೇಖ್(21) ಹಾಗೂ ಮಹಮದ್ ಅನ್ಸಾರಿ(28) ಈ ನಾಲ್ವರೂ ತಪ್ಪಿತಸ್ಥರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮುಖ್ಯ ಸೆಷನ್ಸ್ ಕೋರ್ಟ್‌ನ ನ್ಯಾಯಾಧೀಶರಾದ  ಶಾಲಿನಿ ಫನ್ಸಾಳ್ಕರ್ ಜೋಷಿ ತೀರ್ಪು ನೀಡಿದರು.

ಛಾಯಾಗ್ರಾಹಕಿ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರ ಪರ ವಕೀಲರು ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಶಿಕ್ಷೆ ಪ್ರಮಾಣ ಪ್ರಕಟಣೆಯನ್ನು ನ್ಯಾಯಾಲಯವು ಮಾರ್ಚ್ 24ಕ್ಕೆ ಮುಂದೂಡಿತು.

ಶಕ್ತಿ ಮಿಲ್ ಆವರಣದಲ್ಲಿ 2013ರ ಆಗಸ್ಟ್ 22ರಂದು ನಡೆದ ಛಾಯಾಗ್ರಾಹಕಿ ಹಾಗೂ 2013ರ ಜುಲೈ 31ರಂದು ನಡೆದ ಮಹಿಳಾ ‘ಟೆಲಿಪೊನ್ ಆಪರೇಟರ್’ ಮೇಲಿನ ಅತ್ಯಾಚಾರ ಪ್ರಕರಣಗಳ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಶಾಲಿನಿ ಫನ್ಸಾಳ್ಕರ್ ಜೋಷಿ ಅವರು ಪ್ರಕರಣಕ್ಕೆ ಸಂಬಂಧಿಸಿದ ಏಳು ಜನ ಆರೋಪಿಗಳ ಪೈಕಿ ಐವರನ್ನು ತಪ್ಪಿತಸ್ಥರೆಂದು ಗುರುವಾರ ತೀರ್ಪು ನೀಡಿ, ಶಿಕ್ಷೆಯ ಪ್ರಮಾಣವನ್ನು ಕಾಯ್ದಿರಿಸಿದ್ದರು.

ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಅಪ್ರಾಪ್ತರು ಸೇರಿದಂತೆ ಏಳು ಜನ ಆರೋಪಿಗಳನ್ನು ಬಂಧಿಸಲಾಗಿತ್ತು. ಎರಡು ಪ್ರಕರಣದಲ್ಲಿ ತಲಾ ಒಬ್ಬರು ಬಾಲಾರೋಪಿಗಳಿದ್ದು, ಇದರ ವಿಚಾರಣೆಯನ್ನು ಬಾಲ ನ್ಯಾಯ ಮಂಡಳಿ ಪ್ರತ್ಯೇಕವಾಗಿ ನಡೆಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.