ADVERTISEMENT

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷ್ಯ ನುಡಿಯದಂತೆ ಲಂಚ; ಲಂಚ ಸ್ವೀಕರಿಸಿದ ಅಪ್ಪ ಅಮ್ಮನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ ಸಂತ್ರಸ್ತೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2018, 7:24 IST
Last Updated 17 ಏಪ್ರಿಲ್ 2018, 7:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಸಾಮೂಹಿಕ ಅತ್ಯಾಚಾರಕ್ಕೊಳಗಾದ 15ರ ಹರೆಯದ ಬಾಲಕಿ ನ್ಯಾಯಾಲಯದಲ್ಲಿ ಅತ್ಯಾಚಾರಿಗಳ ವಿರುದ್ಧ ನೀಡಿರುವ ಹೇಳಿಕೆಯನ್ನು ಬದಲಾಯಿಸುವಂತೆ ಒತ್ತಾಯಿಸಿ ಸಂತ್ರಸ್ತೆಯ ಹೆತ್ತವರಿಗೆ ಲಂಚ ನೀಡಲಾಗಿತ್ತು.  ಅತ್ಯಾಚಾರ ಪ್ರಕರಣದ ಆರೋಪಿಗಳು ತನ್ನ ಹೆತ್ತವರಿಗೆ ಲಂಚ ನೀಡಿದ್ದನ್ನು ಅರಿತ ಸಂತ್ರಸ್ತೆ, ಲಂಚ ಪಡೆದ ಹಣವನ್ನು ಪೊಲೀಸ್ ಠಾಣೆಗೆ ತಂದು ತನ್ನ ಹೆತ್ತವರ ವಿರುದ್ಧ ದೂರು ನೀಡಿದ್ದಾಳೆ.

ನೋಟಿನ ಕಂತೆಯನ್ನು ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದ ಬಾಲಕಿ ಅದರಲ್ಲಿ ₹3 ಲಕ್ಷ ರೂಪಾಯಿ ಇದೆ ಎಂದು ಹೇಳಿದ್ದಳು. ಆದರೆಎಣಿಸಿ ನೋಡಿದಾಗ ₹4.96 ಲಕ್ಷ ಇತ್ತು ಎಂದು ಡಿಸಿಪಿ ಎಂಎನ್ ತಿವಾರಿ ಹೇಳಿದ್ದಾರೆ.

ಅಪರಾಧ ಸಂಚು, ಸುಳ್ಳು ಸಾಕ್ಷ್ಯ ನೀಡುವಂತೆ ಒತ್ತಾಯ ಮತ್ತು ಅಪರಾಧ ಬೆದರಿಕೆ ಆರೋಪದಲ್ಲಿ ಬಾಲಕಿಯ ಹೆತ್ತವರ ವಿರುದ್ಧ ಪ್ರಕರಣ ದಾಖಲಾಗಿದೆ.
ನಾವು ಈಗಾಗಲೇ ಬಾಲಕಿಯ ಅಮ್ಮನನ್ನು ಬಂಧಿಸಿದ್ದೇವೆ, ಅಪ್ಪ ತಲೆ ಮರೆಸಿಕೊಂಡಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ಬಗ್ಗೆ ಹುಡುಕಾಟ ನಡೆಸುತ್ತಿದ್ದೇವೆ ಎಂದು ಡಿಸಿಪಿ ಹೇಳಿದ್ದಾರೆ.

ADVERTISEMENT

ಅಮನ್ ವಿಹಾರ್‍‍ನಲ್ಲಿರುವ ಪ್ರೇಮ್ ನಗರ್‍‌‍ನಲ್ಲಿ ಬಾಲಕಿ ವಾಸವಾಗಿದ್ದು ಈಕೆಯ ಹೆತ್ತವರು ಸಣ್ಣ ವ್ಯಾಪಾರ ನಡೆಸಿ ಬದುಕು ಸಾಗಿಸುತ್ತಿದ್ದಾರೆ.
ಕಳೆದ ವರ್ಷ ಆಗಸ್ಟ್ 30ರಂದು ಈ ಬಾಲಕಿ ನಾಪತ್ತೆಯಾಗಿದ್ದಳು. ಈಕೆಯನ್ನು ಅಪಹರಿಸಲಾಗಿತ್ತು ಎಂಬುದು ನಂತರದ ತನಿಖೆಯಿಂದ ತಿಳಿದು ಬಂದಿತ್ತು. ನಾಪತ್ತೆಯಾಗಿ ಒಂದು ವಾರದ ನಂತರ ಮರಳಿ ಬಂದ ಈಕೆ ಅಲ್ಲಿನ ಸ್ಥಳೀಯ ಜಮೀನು ದಲ್ಲಾಳಿ ಮತ್ತು ಇನ್ನೊಬ್ಬ ವ್ಯಕ್ತಿ ತನ್ನನ್ನು ಅಪಹರಿಸಿದ್ದಾರೆ ಎಂದು ದೂರು ನೀಡಿದ್ದಳು. ಅಪಹರಿಸಿದ ನಂತರ ತನ್ನನ್ನು ನೋಯ್ಡಾ ಮತ್ತು ಗಾಜಿಯಾಬಾದ್‍ಗೆ ಕರೆದುಕೊಂಡು ಹೋಗಿ ಅಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿದ್ದರು ಎಂದು ಬಾಲಕಿ ದೂರು ನೀಡಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.ಇತ್ತೀಚೆಗೆ ಈ ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದರು.

ಆರೋಪಿಗಳ ಆಪ್ತರು ಅತ್ಯಾಚಾರಕ್ಕೊಳಗಾದ ಬಾಲಕಿಯ ಹೆತ್ತವರರನ್ನು ಭೇಟಿ ಮಾಡಿ, ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯದಂತೆ 20 ಲಕ್ಷ ಲಂಚ ನೀಡುವ ಆಮಿಷವೊಡ್ಡಿದ್ದಾರೆ.ಇದಕ್ಕಾಗಿ ಈಗಾಗಲೇ  ₹5 ಲಕ್ಷ ಮುಂಗಡ ಹಣ ನೀಡಿದ್ದಾರೆ ಎಂಬುದು ಬಾಲಕಿಗೆ ಗೊತ್ತಿತ್ತು ಎಂದು ಪ್ರಕರಣದ ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ.

ನ್ಯಾಯಾಲಯದಲ್ಲಿ  ಆರೋಪಿಗಳ ವಿರುದ್ಧ ಸಾಕ್ಷ್ಯ ನುಡಿಯದಂತೆ ಬಾಲಕಿಯ ಹೆತ್ತವರು ಆಕೆ ಮೇಲೆ ಒತ್ತಡ ಹೇರುತ್ತಿದ್ದರು. ಹೆತ್ತವರ ಒತ್ತಾಯಕ್ಕೆ ಬಗ್ಗದೆ ಬಾಲಕಿ ಅವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದಳು.

ಏಪ್ರಿಲ್  10ರಂದು ಹೆತ್ತವರ ಅನುಪಸ್ಥಿತಿಯಲ್ಲಿ ಲಂಚದ ಬಗ್ಗೆ ಬಾಲಕಿ ಪೊಲೀಸರಿಗೆ ಮಾಹಿತಿ ನೀಡಿದ್ದಳು. ಲಂಚ ಪಡೆದ ಹಣವನ್ನು ಆಕೆಯ ಹೆತ್ತವರು ಹಾಸಿಗೆಯಡಿಯಲ್ಲಿ ಬಚ್ಚಿಟ್ಟಿದ್ದರು. ಅದನ್ನು ಹಾಗೆಯೇ ತೆಗೆದುಕೊಂಡು ಬಾಲಕಿ ಪ್ರೇಮ್ ವಿಹಾರ್ ಪೊಲೀಸ್ ಠಾಣೆಗೆ ಬಂದಿದ್ದಳು ಎಂದು ಅಲ್ಲಿನ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಇದೀಗ ಬಾಲಕಿಯನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ)ಗೆ ಒಪ್ಪಿಸಿ, ಅಲ್ಲಿಂದ ಬಾಲಮಂದಿರಕ್ಕೆ ಕಳುಹಿಸಿಕೊಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.