ADVERTISEMENT

ಸಾಮೂಹಿಕ ಅತ್ಯಾಚಾರ: ವಿಚಾರಣೆ ವರ್ಗಾವಣೆ ಕೋರಿಕೆ ಅರ್ಜಿ ಆಲಿಕೆಗೆ ಸುಪ್ರೀಂ ಅಸ್ತು

​ಪ್ರಜಾವಾಣಿ ವಾರ್ತೆ
Published 21 ಜನವರಿ 2013, 10:18 IST
Last Updated 21 ಜನವರಿ 2013, 10:18 IST
ಸಾಮೂಹಿಕ ಅತ್ಯಾಚಾರ: ವಿಚಾರಣೆ ವರ್ಗಾವಣೆ ಕೋರಿಕೆ ಅರ್ಜಿ ಆಲಿಕೆಗೆ ಸುಪ್ರೀಂ ಅಸ್ತು
ಸಾಮೂಹಿಕ ಅತ್ಯಾಚಾರ: ವಿಚಾರಣೆ ವರ್ಗಾವಣೆ ಕೋರಿಕೆ ಅರ್ಜಿ ಆಲಿಕೆಗೆ ಸುಪ್ರೀಂ ಅಸ್ತು   

ನವದೆಹಲಿ (ಪಿಟಿಐ): ದೆಹಲಿಯಲ್ಲಿ ಡಿಸೆಂಬರ್ 16ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು ದೆಹಲಿಯಿಂದ ಹೊರಗೆ ಬೇರೆಲ್ಲಾದರೂ ನಡೆಸಬೇಕು ಎಂಬುದಾಗಿ ಆರು ಮಂದಿ ಆರೋಪಿಗಳ ಪೈಕಿ ಒಬ್ಬ ಮಾಡಿದ ಮನವಿಯನ್ನು ಮಂಗಳವಾರ (ಜನವರಿ 22) ಆಲಿಸಲು ಸುಪ್ರೀಂಕೋರ್ಟ್ ಸೋಮವಾರ ಒಪ್ಪಿಗೆ ನೀಡಿತು.

ತನ್ನ ವಿರುದ್ಧ ಸಾರ್ವಜನಿಕ ಭಾವನೆ ಅತ್ಯಂತ ಪ್ರಬಲವಾಗಿರುವುದರಿಂದ ದೆಹಲಿಯಲ್ಲಿ ಮುಕ್ತ- ಪ್ರಾಮಾಣಿಕ ವಿಚಾರಣೆ ಸಾಧ್ಯವಾಗದು ಎಂಬ ಕಾರಣದಿಂದ ಸಲ್ಲಿಸಿರುವ ತನ್ನ ಮನವಿಯನ್ನು ತುರ್ತಾಗಿ ಆಲಿಸಬೇಕು ಎಂಬುದಾಗಿ ಆರೋಪಿ ಮುಖೇಶ್ ಪರ ವಕೀಲರು ಮಾಡಿದ ಮನವಿಯನ್ನು ಪರಿಗಣಿಸಿದ ಮುಖ್ಯನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ಪೀಠವು ಮಂಗಳವಾರ ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಳ್ಳುವಂತೆ ಸೂಚಿಸಿತು.

ನಿರಂತರ ಚಳವಳಿ ನಡೆಯುತ್ತಿರುವ ಕಾರಣ ಪೊಲೀಸರು ಮತ್ತು ನ್ಯಾಯಾಂಗ ಅಧಿಕಾರಿಗಳು ಚಳವಳಿಗಾರರ ಬೇಡಿಕೆಗೆ ಅನುಗುಣವಾಗಿ ಆದೇಶ ನೀಡಬೇಕೆಂಬ  ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಮುಕ್ತ ವಿಚಾರಣೆ ಸಾಧ್ಯವಾಗುತ್ತಿಲ್ಲ ಎಂದು ಕೊಲೆ, ಸಾಮೂಹಿಕ ಅತ್ಯಾಚಾರ ಮತ್ತು ಅಸಹಜ ಅಪರಾಧಗಳ ಆರೋಪಕ್ಕೆ ಗುರಿಯಾಗಿರುವ ಮುಖೇಶ್ ಮನವಿ ತಿಳಿಸಿದೆ.

ಸಾರ್ವಜನಿಕ ಭಾವನೆಗಳು ದೆಹಲಿಯ ಪ್ರತಿಯೊಂದು ಮನೆಯಲ್ಲೂ ಆಳವಾಗಿ ಬೇರೂರಿವೆ. ನ್ಯಾಯಾಂಗ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಇದರಿಂದ ಹೊರತಾಗಿಲ್ಲ. ಈ ಪರಿಸ್ಥಿತಿಯಲ್ಲಿ ದೆಹಲಿಯಲ್ಲಿ ತನಗೆ ನ್ಯಾಯ ಸಿಗಲು ಸಾಧ್ಯವೇ ಇಲ್ಲ ಎಂಬುದಾಗಿ ವಕೀಲರ ಮೂಲಕ ಸಲ್ಲಿಕೆಯಾಗಿರುವ ಮುಖೇಶ್ ಅರ್ಜಿ ತಿಳಿಸಿದೆ.

ಪ್ರಕರಣವನ್ನು ಕ್ಷಿಪ್ರ ವಿಚಾರಣಾ ನ್ಯಾಯಾಲಯಕ್ಕೆ ವಹಿಸಲಾಗಿದ್ದು ಈದಿನದಿಂದ ಪ್ರತಿದಿನ ವಿಚಾರಣಾ ಕಲಾಪಗಳು ನಡೆಯಲಿವೆ.

ಮಾಧ್ಯಮ ವರದಿಗಳು, ಚಳವಳಿಗಳು, ರಾಜಕೀಯ ಹೇಳಿಕೆಗಳು ಮತ್ತು ಮುಖ್ಯಮಂತ್ರಿ ಹಾಗೂ ಇತರ ಸಂಪುಟ ದರ್ಜೆ ಸಚಿವರು ತೋರಿಸಿರುವ ಖಾಸಗಿ ಆಸಕ್ತಿಯ ಕಾರಣ ಅರ್ಜಿದಾರರ ವಿರುದ್ಧ ಕಾರ್ಯಾಚರಿಸುವಂತಹ ಒತ್ತಡ ನ್ಯಾಯಾಂಗದ ಮೇಲೆ ಬಿದ್ದಿದೆ ಎಂದು ತಿಳಿಸಿದ ಅರ್ಜಿ, ಪ್ರಕರಣವನ್ನು ಉತ್ತರ ಪ್ರದೇಶದ ಮಥುರಾಕ್ಕೆ ವರ್ಗಾಯಿಸಬೇಕು ಎಂದು ಕೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT