ADVERTISEMENT

ಸಾಲ ವಸೂಲಾತಿಯೇ ಕೊನೆಯ ಮಾರ್ಗ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2012, 19:30 IST
Last Updated 21 ಅಕ್ಟೋಬರ್ 2012, 19:30 IST

ಮುಂಬೈ (ಪಿಟಿಐ): ಮದ್ಯದ ದೊರೆ ವಿಜಯ ಮಲ್ಯ ಒಡೆತನದ ಕಿಂಗ್‌ಫಿಷರ್ ಏರ್‌ಲೈನ್ಸ್ ಸಂಸ್ಥೆಯ ಹಾರಾಟ ಪರವಾನಿಗೆಯನ್ನು ಸರ್ಕಾರ ಅಮಾನತುಗೊಳಿಸಿರುವ ಹಿನ್ನೆಲೆಯಲ್ಲಿ ಸಂಸ್ಥೆಗೆ ನೀಡಿರುವ ಸಾಲದ ಮರುಪಾವತಿ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಬ್ಯಾಂಕಿಂಗ್ ಸಂಸ್ಥೆಗಳು ಸಾಲ ವಸೂಲಾತಿಯೇ ಕೊನೆಯ ಮಾರ್ಗವಾಗಿದ್ದು ಸಂಸ್ಥೆಯ ಚಟುವಟಿಕೆ ಪುನರಾರಂಭಗೊಳ್ಳುವ ಬಗ್ಗೆಯೂ ಆಶಾವಾದ ವ್ಯಕ್ತಪಡಿಸಿವೆ.

ಕಿಂಗ್‌ಫಿಷರ್ ಏರ್‌ಲೈನ್ಸ್‌ನಿಂದ ಎಸ್‌ಬಿಐ ಸೇರಿದಂತೆ ವಿವಿಧ ಬ್ಯಾಂಕಿಂಗ್, ಹಣಕಾಸು ಸಂಸ್ಥೆಗಳಿಗೆ ಸುಮಾರು 7,500 ಕೋಟಿ ಸಾಲ ಮರುಪಾವತಿಯಾಗಬೇಕಿದೆ. ಈ ಪೈಕಿ `ಎಸ್‌ಬಿಐ~ ಗೆ ಸುಮಾರು ರೂ 1,500 ಕೋಟಿ ನೀಡಬೇಕಾಗಿದೆ.`ಈಗಿನ ಸ್ಥಿತಿಯಲ್ಲಿ ನಮ್ಮ ಬಾಕಿಯ ಮೊತ್ತದಲ್ಲಿ ಕೇವಲ ಶೇ 10ರಿಂದ 15ರಷ್ಟನ್ನು ಮಾತ್ರ ವಸೂಲು ಮಾಡಬಹುದಾಗಿದೆ. ಹಾಗಾಗಿ ಸಾಲ ವಸೂಲಾತಿಯ ಎಲ್ಲ ಪ್ರಕ್ರಿಯೆಗಳನ್ನು ಆರಂಭಿಸುವುದೇ ನಮಗಿರುವ ಕೊನೆಯ ಮಾರ್ಗ~ ಎಂದು ರೂ 500 ಕೋಟಿ ಬಾಕಿ ಇರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ನ  ಅಧಿಕಾರಿ ತಿಳಿಸಿದರು.

`ಕಿಂಗ್‌ಫಿಷರ್ ತನ್ನ ಹಾರಾಟ ನಿಲ್ಲಿಸಿದ್ದರಿಂದ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಅಮಾನತು ಆದೇಶ ಹೊರಡಿಸಿರುವುದರಲ್ಲಿ ಅಚ್ಚರಿ ಏನಿಲ್ಲ. ಆದರೆ ಈ ಬೆಳವಣಿಗೆಗಳನ್ನು ನಿಯಂತ್ರಿಸುವುದು ನಮ್ಮ ಕೈಯಲ್ಲಿ ಇಲ್ಲ~ ಎಂದು ಎಸ್‌ಬಿಐ ವ್ಯವಸ್ಥಾಪಕ ನಿರ್ದೇಶಕ ಎಸ್. ವಿಶ್ವನಾಥನ್ ತಿಳಿಸಿದರು.

ನಷ್ಟದ ಸಂಸ್ಥೆಯನ್ನು ಮುನ್ನಡೆಸಲು ಹೊಸ ಉದ್ಯಮಿ ಮುಂದೆ ಬಂದಲ್ಲಿ ಇಲ್ಲವೆ ಪುನಶ್ಚೇತನ ಯೋಜನೆ ಜಾರಿಗೊಳಿಸಿ ಮತ್ತೆ ಹಾರಾಟ ಆರಂಭಿಸಿದರೆ ಬಾಕಿ ಪಾವತಿ ಸಮಸ್ಯೆ ಇರುವುದಿಲ್ಲ. ಇದಾಗದಿದ್ದರೆ ಸಂಸ್ಥೆ ಸಂಪೂರ್ಣ ಮುಚ್ಚಿಹೋದಲ್ಲಿ ಆಗ ಬ್ಯಾಂಕ್ ವಸೂಲಾತಿಯ ಅಂತಿಮ ಕ್ರಮಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ವಿಶ್ವನಾಥನ್ ತಿಳಿಸಿದರು.

ವಿಜಯ ಮಲ್ಯ ತಿಳಿಸುವಂತೆ ಸಂಸ್ಥೆ ಈಗಾಗಲೇ ರೂ 8000 ಕೋಟಿ ನಷ್ಟ ಅನುಭವಿಸಿದ್ದು ರೂ 7500 ಕೋಟಿಗೂ ಅಧಿಕ ಮೊತ್ತವನ್ನು ವಿವಿಧ ಬ್ಯಾಂಕ್‌ಗಳಿಗೆ ಪಾವತಿಸಬೇಕಾಗಿದೆ. ವರ್ಷದ ಹಿಂದೆ ಕಿಂಗ್‌ಫಿಷರ್ ಏರ್‌ಲೈನ್ಸ್ 66 ವಿಮಾನಗಳನ್ನು ಹೊಂದಿದ್ದರೆ ಅದರ ಬಳಿ ಈಗ ಬರಿ 10 ವಿಮಾನಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.