ADVERTISEMENT

ಸಿಂಗ್ ಜನ್ಮದಿನಾಂಕ ವಿವಾದ ದುರದೃಷ್ಟಕರ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2012, 19:30 IST
Last Updated 13 ಫೆಬ್ರುವರಿ 2012, 19:30 IST

ನವದೆಹಲಿ (ಪಿಟಿಐ): ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರ ಜನ್ಮದಿನಾಂಕ ವಿವಾದವನ್ನು `ದುರದೃಷ್ಟಕರ~ ಎಂದಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ , `ವಿವಾದಕ್ಕೆ ಸಂಬಂಧಿಸಿದಂತೆ  ಸರ್ಕಾರ ಮತ್ತು ಸೇನಾ ಮುಖ್ಯಸ್ಥರ ನಡುವಿನ ಕಾನೂನು ಸಮರಕ್ಕೆ ಸುಪ್ರೀಂಕೋರ್ಟ್ ತೀರ್ಪು ಅಂತ್ಯ ಹಾಡಿದೆ. ಹಾಗಾಗಿ ಈ ವಿಷಯವನ್ನು ಇಲ್ಲಿಗೆ ಕೈಬಿಡುವಂತೆ ಸೋಮವಾರ ತಮ್ಮ ಸಹೋದ್ಯೋಗಿಗಳಿಗೆ ಸೂಚಿಸಿದರು. `ಪ್ರಕರಣ ಅಂತ್ಯ ಕಂಡಿರುವುದಕ್ಕೆ  ಸಂತಸವಾಗಿದೆ. ರಾಷ್ಟ್ರೀಯ ಭದ್ರತೆಯನ್ನು ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ~ ಎಂದು ಸುದ್ದಿಗಾರರಿಗೆ ತಿಳಿಸಿದರು.

ಸೌದಿ ಪ್ರವಾಸ
ಭಾರತ ಮತ್ತು ಸೌದಿ ಅರೇಬಿಯಾ ನಡುವಿನ ಸೇನಾ  ಸಂಬಂಧ ಬಲಪಡಿಸುವಿಕೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಉಭಯದೇಶಗಳ ಪರಸ್ಪರ ಹಿತಾಸಕ್ತಿಗಳನ್ನು ಕುರಿತು ಚರ್ಚಿಸುವ ನಿಟ್ಟಿನಲ್ಲಿ ಆಂಟನಿ ಸೋಮವಾರ ಸೌದಿ ಅರೇಬಿಯಾಗೆ ತೆರಳಿದ್ದಾರೆ.ಸೌದಿ ಅರೇಬಿಯಾಕ್ಕೆ ಇದೇ ಮೊದಲ ಬಾರಿಗೆ ಭಾರತದ ರಕ್ಷಣಾ ಸಚಿವರೊಬ್ಬರು ಭೇಟಿ ನೀಡುತ್ತಿರುವುದು ಗಮನಾರ್ಹವಾಗಿದೆ.

ಎರಡು ದಿನಗಳ ಸಚಿವರ ಭೇಟಿಯ ನಿಯೋಗದಲ್ಲಿ ರಕ್ಷಣಾ ಇಲಾಖೆಯ ಕಾರ್ಯದರ್ಶಿ ಶಶಿಕಾಂತ್ ಶರ್ಮ, ಸೇನಾ ಉಪ ಮುಖ್ಯಸ್ಥ ಲೆ. ಜನರಲ್ ಎಸ್.ಕೆ.ಸಿಂಗ್, ನೌಕಾಪಡೆಯ ಪ್ರಧಾನ ಉಪ ಮುಖ್ಯಸ್ಥ ಸತೀಶ್ ಸೋನಿ ಮತ್ತು ವಾಯುಪಡೆಯ ಉಪ ಮುಖ್ಯಸ್ಥ ಎಂ.ಆರ್.ಪವಾರ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.