ADVERTISEMENT

ಸಿಎಂಸಿ ಆದೇಶ: ಕರ್ನಾಟಕಕ್ಕೆ ಹಿನ್ನಡೆ ಕಾವೇರಿ ನ್ಯಾಯ ಮಂಡಳಿ ತೀರ್ಪು ಉಲ್ಲಂಘನೆ

ಅಜಿತ್ ಅತ್ರಾಡಿ
Published 7 ಡಿಸೆಂಬರ್ 2012, 20:38 IST
Last Updated 7 ಡಿಸೆಂಬರ್ 2012, 20:38 IST

ನವದೆಹಲಿ: ಕಾವೇರಿ ನದಿಯಿಂದ ತಮಿಳುನಾಡಿಗೆ 12 ಟಿಎಂಸಿ ಅಡಿ ನೀರು ಬಿಡಬೇಕು ಎಂದು ಕಾವೇರಿ ನಿರ್ವಹಣಾ ಸಮಿತಿ (ಸಿಎಂಸಿ) ಹೊರಡಿಸಿರುವ ಆದೇಶ ಕರ್ನಾಟಕಕ್ಕೆ ದೊಡ್ಡ ಹಿನ್ನಡೆ ಎನಿಸಿದೆ.

ಕಾವೇರಿ ನ್ಯಾಯಮಂಡಳಿ (ಸಿಡಬ್ಲ್ಯೂಡಿಟಿ) ಮಧ್ಯಂತರ ತೀರ್ಪಿನ ಪ್ರಕಾರ, ಸಾಮಾನ್ಯ ಮಳೆಗಾಲದ ಸನ್ನಿವೇಶದಲ್ಲಿ ತಮಿಳುನಾಡಿಗೆ ಕರ್ನಾಟಕದ ಕಾವೇರಿ ನದಿಪಾತ್ರದಿಂದ 10.37 ಟಿಎಂಸಿ ಅಡಿ ನೀರು ಬಿಡಬೇಕಾಗುತ್ತದೆ. ಆದರೆ ಕರ್ನಾಟಕವೇ ಮಳೆಯ ಅಭಾವ ಎದುರಿಸುತ್ತಿದ್ದರೆ ಡಿಸೆಂಬರ್ ತಿಂಗಳ ಪೂರ್ತಿ ತಮಿಳುನಾಡಿಗೆ ಕೇವಲ 6.2 ಟಿಎಂಸಿ ನೀರನ್ನು ಮಾತ್ರ ಹರಿಸಬೇಕಾಗುತ್ತದೆ.

ಸಿಡಬ್ಲ್ಯೂಡಿಟಿ ನೀಡಿರುವ ವರದಿಯ ಆಧಾರದಲ್ಲೇ ಸಿಎಂಸಿ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈಗ ಸಿಎಂಸಿ ಹೊರಡಿಸಿರುವ ಆದೇಶ ಸಿಡಬ್ಲ್ಯೂಡಿಟಿ ಮಧ್ಯಂತರ ತೀರ್ಪಿಗೆ ವ್ಯತಿರಿಕ್ತವಾಗಿದ್ದು, ಇದರಿಂದ ಕರ್ನಾಟಕಕ್ಕೆ ಅನ್ಯಾಯವಾದಂತಾಗಿದೆ.

ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿ ನೀರಿನ ತೀವ್ರ ಅಭಾವ ಕಾಣಿಸಿಕೊಂಡಿದ್ದರೂ ತಮಿಳುನಾಡಿಗೆ 12 ಟಿಎಂಸಿ ನೀರನ್ನು ಬಿಡಬೇಕು ಎನ್ನುವ ಸಿಎಂಸಿ ಆದೇಶ ನಿಜಕ್ಕೂ ಆಶ್ಚರ್ಯ ಮೂಡಿಸಿದ್ದು ಕರ್ನಾಟಕದ ಹಿತಾಸಕ್ತಿ ಬಲಿಕೊಡಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಕರ್ನಾಟಕದ ಜಲಾಶಯಗಳಲ್ಲಿ 36 ಟಿಎಂಸಿ ಅಡಿ ನೀರಿದ್ದರೂ ಈ ಹಂಗಾಮಿಗೆ ಒಟ್ಟು 34.8 ಟಿಎಂಸಿ ಅಡಿ ನೀರಿನ ಕೊರತೆ ಕಾಣಿಸಿಕೊಂಡಿದೆ. ತಮಿಳುನಾಡಿನಲ್ಲಿಯ ನೀರಿನ ಒಟ್ಟು ಲಭ್ಯತೆ ಕೇವಲ 29.5 ಟಿಎಂಸಿ ಅಡಿ ಇದ್ದರೆ 59.5 ಟಿಎಂಸಿ ಅಡಿ ನೀರಿಗೆ ಕೊರತೆ ಉಂಟಾಗಿದೆ ಎಂದು ಸಿಎಂಸಿ ಆದೇಶದಲ್ಲಿ ತಿಳಿಸಲಾಗಿದೆ.

`ಪರಿಸ್ಥಿತಿ ಹೀಗಿರುವಾಗ ಸಿಡಬ್ಲ್ಯೂಡಿಟಿ ನೀಡಿದ ಮಧ್ಯಂತರ ತೀರ್ಪನ್ನು ಪಾಲಿಸಿದಲ್ಲಿ ಉಂಟಾಗಿರುವ ಸಂಕಷ್ಟಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗದು' ಎಂದು ಸಿಎಂಸಿ ಆದೇಶ ನೀಡುವ ಸಂದರ್ಭದಲ್ಲಿ ತಿಳಿಸಿರುವುದು ಗಮನಾರ್ಹ.

`ಡಿಸೆಂಬರ್‌ನಲ್ಲಿ ಕರ್ನಾಟಕ ರಾಜ್ಯ ತಮಿಳುನಾಡಿಗೆ 12 ಟಿಎಂಸಿ ನೀರು ಬಿಟ್ಟಲ್ಲಿ ನೀರಿನ ವಿಷಯದಲ್ಲಿ ಸಮತೋಲನ ಕಾಯ್ದುಕೊಂಡಂತೆ ಆಗುತ್ತದೆ. ಇಷ್ಟು ನೀರು ಬಿಟ್ಟ ಮೇಲೂ ತಮಿಳುನಾಡಿನಲ್ಲಿ ಬೆಳೆದುನಿಂತ ಎಲ್ಲ ಬೆಳೆಗೆ ಅನುಕೂಲವಾಗುವುದಿಲ್ಲ.

ಇದೇ ಹೊತ್ತಿಗೆ ಕರ್ನಾಟಕದ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಉಭಯ ರಾಜ್ಯಗಳು ಇಂತಹ ಸಂಕಷ್ಟದಿಂದ ಹೊರಬರುವಂತಾಗಲು ಅಂತರ್ಜಲ ಮೂಲಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕಷ್ಟೆ' ಎಂದು ಆದೇಶ ತಿಳಿಸಿದೆ.
ಸಿಎಂಸಿಯ ಈ ಆದೇಶದಿಂದ ತೀವ್ರ ಕಳವಳಕ್ಕೀಡಾಗಿರುವ ಕರ್ನಾಟಕದ ಹಿರಿಯ ಅಧಿಕಾರಿಗಳು, ಈ ಆದೇಶ ಏಕಪಕ್ಷೀಯ ಎನಿಸಿದ್ದು, ಸಿಡಬ್ಲ್ಯೂಡಿಟಿ ಮಧ್ಯಂತರ ವರದಿಯ ಉಲ್ಲಂಘನೆಯಾಗಿದೆ, ಇದನ್ನು ಸುಪ್ರೀಂಕೋರ್ಟ್ ಹಾಗೂ ಪ್ರಧಾನಿ ಅಧ್ಯಕ್ಷರಾಗಿರುವ ಕಾವೇರಿ ನದಿ ಪ್ರಾಧಿಕಾರ (ಸಿಆರ್‌ಎ) ಎರಡರಲ್ಲೂ ಪ್ರಶ್ನಿಸಿ ನ್ಯಾಯ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.  

ಕಳೆದ ನವೆಂಬರ್ 30ರತನಕ ತಾನು ಕರ್ನಾಟಕದ ಕಾವೇರಿ ನದಿಯಿಂದ 109 ಟಿಎಂಸಿ ಅಡಿ ನೀರು ಪಡೆಯಬೇಕಾಗಿತ್ತು. ಆದರೆ ಕೇವಲ 73 ಟಿಎಂಸಿ ನೀರು ಮಾತ್ರ ಪಡೆದಿರುವುದಾಗಿ ಶುಕ್ರವಾರ ನಡೆದ ಸಭೆಯಲ್ಲಿ ತಮಿಳುನಾಡು ವಾದ ಮಂಡಿಸಿತು.

ಆದರೆ ತಮಿಳುನಾಡಿನ ಈ ವಾದ ಅಲ್ಲಗಳೆದ ಕರ್ನಾಟಕ ಈ ಬಾರಿ ಮಳೆಯ ತೀವ್ರ ಅಭಾವ ಕಾಣಿಸಿಕೊಂಡ ಪರಿಣಾಮ ನವೆಂಬರ್ 30ರ ವರೆಗೆ ರಾಜ್ಯದ ಜಲಾಶಯಗಳಲ್ಲಿ ಬರಿ 36 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದ್ದು ಇಂತಹ ಸ್ಥಿತಿಯಲ್ಲಿ ನೀರು ಬಿಟ್ಟರೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುವುದರ ಜತೆಯಲ್ಲಿ ಜತೆಗೆ ಕೃಷಿ, ನೀರಾವರಿಗೂ ತೀವ್ರ ತೊಂದರೆಯಾಗಲಿದೆ ಎಂದು ಸ್ಪಷ್ಟಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.