ADVERTISEMENT

ಸಿದ್ದರಾಮಯ್ಯ ಮನವೊಲಿಕೆ ಯಶಸ್ವಿ?

​ಪ್ರಜಾವಾಣಿ ವಾರ್ತೆ
Published 5 ಜೂನ್ 2012, 19:30 IST
Last Updated 5 ಜೂನ್ 2012, 19:30 IST

ನವದೆಹಲಿ: `ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತಮ್ಮನ್ನು ಕಡೆಗಣಿಸಲಾಗಿದೆ~ ಎಂದು ಅಸಮಾಧಾನಗೊಂಡು ವಿಧಾನಸಭೆ ವಿರೋಧ ಪಕ್ಷದ ನಾಯಕನ ಸ್ಥಾನ ತ್ಯಜಿಸುವ ನಿರ್ಧಾರಕ್ಕೆ ಅಂಟಿಕೊಂಡಿರುವ ಸಿದ್ದರಾಮಯ್ಯ ಅವರಿಗೆ `ರಾಜೀನಾಮೆ ಅಂಗೀಕಾರಕ್ಕೆ ಪಟ್ಟು ಹಿಡಿಯಬೇಡಿ~ ಎಂದು ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ಸಂಜೆ ಕಿವಿಮಾತು ಹೇಳಿದೆ.

ಸಿದ್ದರಾಮಯ್ಯ ತಮ್ಮ ಬೆಂಬಲಿಗರಾದ ಸಿ.ಎಂ. ಇಬ್ರಾಹಿಂ ಹಾಗೂ ಡಾ. ಎಚ್.ಸಿ. ಮಹಾದೇವಪ್ಪ ಅವರ ಜತೆಗೂಡಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಕಂಡು ಸುಮಾರು 45 ನಿಮಿಷ ಮಾತುಕತೆ ನಡೆಸಿದರು. ಅನಂತರ ಮೇಡಂ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಜತೆಗೂ ಸಮಾಲೋಚನೆ ನಡೆಸಿದರು. ಸೋಮವಾರ ರಾತ್ರಿ ರಾಹುಲ್ ಗಾಂಧಿ ಜತೆ ಚರ್ಚಿಸಿದ್ದರು.

`ಸಿದ್ದರಾಮಯ್ಯ ರಾಜ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಪರಿಷತ್ ಚುನಾವಣೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವುದರಿಂದ ಸ್ವಾಭಿಮಾನಕ್ಕೆ ಧಕ್ಕೆ ಆಗಿದೆ ಎಂದು ನೇರವಾಗಿ ಹೇಳಿದ್ದಾರೆ. ಕಾಂಗ್ರೆಸ್ ಅಧ್ಯಕ್ಷರು ಎಲ್ಲ ವಿಷಯಗಳನ್ನು ತಾಳ್ಮೆಯಿಂದ ಕೇಳಿಸಿಕೊಂಡಿದ್ದಾರೆ. ಹಿರಿಯ ಮುಖಂಡರ ಜತೆ ಸಮಾಲೋಚಿಸಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವ ಭರವಸೆ ನೀಡಿದ್ದಾರೆ~ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

`ಮೇಡಂ ಜತೆಗಿನ ಚರ್ಚೆ ಸಮಾಧಾನ ತಂದಿದೆ. ರಾಜ್ಯದ ಬಗೆಗೆ ಅವರಿಗೆ ಎಲ್ಲ ಗೊತ್ತಿದೆ. ಸಿದ್ದರಾಮಯ್ಯ ನಡೆಸಿದ ಬಳ್ಳಾರಿ ಪಾದಯಾತ್ರೆ, ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ನಿರ್ವಹಿಸುತ್ತಿರುವ ಪಾತ್ರ ಸೇರಿದಂತೆ ಪ್ರತಿಯೊಂದು ಬೆಳವಣಿಗೆ ಬಗ್ಗೆ ಅರಿವಿದೆ~ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಸೋನಿಯಾ ಭೇಟಿ ಬಳಿಕ ಪತ್ರಕರ್ತರ ಜತೆ ಮಾತನಾಡಿದ ಸಿದ್ದರಾಮಯ್ಯ ಚರ್ಚೆಯ ವಿವರಗಳನ್ನು ನೀಡಲು ನಿರಾಕರಿಸಿದರು. `ರಾಜೀನಾಮೆ ಭವಿಷ್ಯವೇನು~ ಎಂಬ ಪ್ರಶ್ನೆಗೆ, ಅದು ಹೈಕಮಾಂಡ್ ಅಂಗಳದಲ್ಲಿದೆ ಎಂದರು.

`ಸಿದ್ದರಾಮಯ್ಯ ನಮ್ಮ ಪಕ್ಷದ ನಾಯಕರು. ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಮುಂದುವರಿಯುತ್ತಾರೆ. ರಾಜೀನಾಮೆ ಹಿಂದಕ್ಕೆ ಪಡೆಯುತ್ತಾರೆ~ ಎಂದು ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಮಧುಸೂದನ್ ಮಿಸ್ತ್ರಿ ಅಹಮದ್ ಪಟೇಲ್ ಮನೆಯ ಹೊರಗೆ ಪತ್ರಕರ್ತರಿಗೆ ತಿಳಿಸಿದರು.

ಪರಮೇಶ್ವರ ನಾಯಕತ್ವಕ್ಕೆ ಅಪಸ್ವರ: ರಾಜ್ಯ ವಿಧಾನಸಭೆಗೆ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ಜಿ.ಪರಮೇಶ್ವರ್ ನಾಯಕತ್ವವೇ ಮುಂದುವರಿದರೆ ಪಕ್ಷ ಅಧಿಕಾರಕ್ಕೆ ಬರುವುದು ಕಷ್ಟವಾಗಬಹುದು~ ಎಂಬ ಸಂಗತಿಯನ್ನು ಸಿದ್ದರಾಮಯ್ಯನವರ ಜತೆಗಿದ್ದ ಕೆಲವರು ಹೈಕಮಾಂಡ್ ಗಮನಕ್ಕೆ ತಂದರೆನ್ನಲಾಗಿದೆ. ರಾಹುಲ್ ರಾಜ್ಯದ ವಿದ್ಯಮಾನಗಳ ಬಗ್ಗೆ ತಮ್ಮ ತಾಯಿ ಜತೆ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.

ಹೈಕಮಾಂಡ್ ಮುಖಂಡರನ್ನು ಭೇಟಿ ಮಾಡಿದ ನಿಯೋಗದಲ್ಲಿ ಎ.ಮಂಜು, ಸುರೇಶ್‌ಗೌಡ, ಅಭಯಚಂದ್ರ, ಹುಣಸೂರು ಮಂಜುನಾಥ್, ರಮೇಶ್ ಮುಂತಾದವರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.