ADVERTISEMENT

ಸಿಬಿಎಸ್‌ಇ: ಕರ್ನಾಟಕದ ವಿದ್ಯಾರ್ಥಿಗಳು ನಿರಾಳ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 19:30 IST
Last Updated 31 ಮಾರ್ಚ್ 2018, 19:30 IST
ಪ್ರಕಾಶ್ ಜಾವಡೇಕರ್ (ಸಂಗ್ರಹ ಚಿತ್ರ)
ಪ್ರಕಾಶ್ ಜಾವಡೇಕರ್ (ಸಂಗ್ರಹ ಚಿತ್ರ)   

ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ನಡೆಸಲಿರುವ 10ನೇ ತರಗತಿಯ ಗಣಿತ ವಿಷಯದ ಮರು ಪರೀಕ್ಷೆಯನ್ನು ಕರ್ನಾಟಕ ಸೇರಿದಂತೆ 24 ರಾಜ್ಯಗಳ ವಿದ್ಯಾರ್ಥಿಗಳು ಬರೆಯಬೇಕಾಗಿಲ್ಲ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್ ಜಾವಡೇಕರ್ ಶನಿವಾರ ಸ್ಪಷ್ಟಪಡಿಸಿದ್ದಾರೆ.

‘ಈ ಬಾರಿ 10ನೇ ತರಗತಿ ಪರೀಕ್ಷೆ ಬರೆಯುತ್ತಿರುವ ಒಟ್ಟು 16 ಲಕ್ಷ ವಿದ್ಯಾರ್ಥಿಗಳ ಪೈಕಿ 14 ಲಕ್ಷ ವಿದ್ಯಾರ್ಥಿಗಳು ಗಣಿತ ಮರು ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಅಂದಾಜು ಎರಡು ಲಕ್ಷ ವಿದ್ಯಾರ್ಥಿಗಳು ಮಾತ್ರ ಮರು ಪರೀಕ್ಷೆ ಬರೆಯುವುದು ಅನಿವಾರ್ಯ. ಇದು ಅಂತಿಮ ನಿರ್ಧಾರ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ನಡುವೆ ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ 10ನೇ ತರಗತಿಯ ಗಣಿತ ಮತ್ತು 12ನೇ ತರಗತಿ ಅರ್ಥಶಾಸ್ತ್ರದ ಮರು ಪರೀಕ್ಷೆ ನಡೆಸುವ ಸಿಬಿಎಸ್‌ಇ ನಿರ್ಧಾರದ ವಿರುದ್ಧ ಪೋಷಕರು ಶನಿವಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

‘ಯಾವುದೇ ತನಿಖೆ ನಡೆಸದೆ ಮರು ಪರೀಕ್ಷೆಗೆ ಮುಂದಾಗಿರುವುದು ಸರಿಯಲ್ಲ. ಇದರಿಂದ ವಿದ್ಯಾರ್ಥಿಗಳ ಮೂಲಭೂತ ಹಕ್ಕು ಉಲ್ಲಂಘನೆಯಾಗುತ್ತದೆ’ ಎಂದು ದೆಹಲಿಯ ರೀಪಕ್‌ ಕನ್ಸಾಲ್‌ ಎಂಬುವರು ತಕರಾರು ಎತ್ತಿದ್ದಾರೆ.

‘ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪರೀಕ್ಷೆಗೆ ಸಾಕಷ್ಟು ಮುಂಚೆಯೇ ದೂರು ಬಂದಿದ್ದರೂ ಮಂಡಳಿಯು ಪ್ರಶ್ನೆ ಪತ್ರಿಕೆ ಸೋರಿಕೆ ಆಗಿಲ್ಲ ಎಂದು ಸುಳ್ಳು ಹೇಳಿದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ಈ ವರ್ಷ ದೇಶದಾದ್ಯಂತ 16,38,428 ವಿದ್ಯಾರ್ಥಿಗಳು 10ನೇ ತರಗತಿ ಮತ್ತು 11,86,306 ವಿದ್ಯಾರ್ಥಿಗಳು 12ನೇ ತರಗತಿಯ ಪರೀಕ್ಷೆ ಬರೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.