ADVERTISEMENT

ಸಿಬಿಐಗೆ ಸ್ವಾಯತ್ತತೆ: ಹೊಸ ಮಸೂದೆ ಇಲ್ಲ?

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ನವದೆಹಲಿ (ಪಿಟಿಐ): ಸಿಬಿಐ ಮೇಲಿರುವ ಹಿಡಿತವನ್ನು ಕಳೆದುಕೊಳ್ಳಲು ಸಿದ್ಧವಿಲ್ಲದ ಕೇಂದ್ರ ಸರ್ಕಾರ ಸಿಬಿಐಗೆ ಸ್ವಾಯತ್ತತೆ ನೀಡಲು ಹೊಸ ಮಸೂದೆ ತರುವ ಯತ್ನದಿಂದ ಹಿಂದೆ ಸರಿದಿದೆ ಎನ್ನಲಾಗಿದೆ.

ಹೊಸ ಮಸೂದೆ ಜಾರಿಗೆ ತರುವ ಮೂಲಕ ಸಿಬಿಐ ಅನ್ನು ಹೊರಗಿನವರ ಪ್ರಭಾವದಿಂದ ಮುಕ್ತಗೊಳಿಸಲು ಕೇಂದ್ರದ ಸಚಿವರ ಸಮಿತಿಯೊಂದನ್ನು ರಚಿಸಲಾಗಿದ್ದು ಈಗಾಗಲೇ ಈ ಸಂಬಂಧ ಸಮಿತಿ ಎರಡು ಸಭೆ ನಡೆಸಿದೆ. ಆದರೆ ಸಿಬಿಐ ಮೇಲಿರುವ ಹಿಡಿತ ಕಳೆದುಕೊಳ್ಳಲು ಸಿದ್ಧವಿಲ್ಲದ ಕೇಂದ್ರ ಈ ಕುರಿತು ಯಾವುದೇ ಉತ್ಸಾಹ ತೋರಿಸಿಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯ್ದೆ (ಡಿಎಸ್‌ಪಿಇ) ಅಡಿ ಸದ್ಯ ಸಿಬಿಐ ಕಾರ್ಯನಿರ್ವಹಿಸುತ್ತಿದ್ದು ಸ್ವಾಯತ್ತತೆಗಾಗಿ ಹೊಸ ಕಾಯಿದೆ ಜಾರಿಗೆ ತರುವ ಬದಲಿಗೆ ಪ್ರಸ್ತುತ ಇರುವ ಕಾಯಿದೆಯಲ್ಲಿ ಬದಲಾವಣೆ ತರಲು ಸಚಿವರ ಸಮಿತಿ ಒಲವು ವ್ಯಕ್ತಪಡಿಸಿದೆ ಎನ್ನಲಾಗಿದೆ.

ಸದ್ಯ ಕೇಂದ್ರ ಸರ್ಕಾರ ಸೂಚಿಸುವ ಅಪರಾಧ ಪ್ರಕರಣಗಳ ಕುರಿತು ಮಾತ್ರ ಸಿಬಿಐ ತನಿಖೆ ಕೈಗೊಳ್ಳಬಹುದು. ಆದರೆ ಕಾಯಿದೆಯಲ್ಲಿ ಬದಲಾವಣೆ ತಂದಲ್ಲಿ ವಿವಿಧ ರಾಜ್ಯಗಳ ಗಡಿಗುಂಟ ಇರುವ ಪ್ರಕರಣಗಳನ್ನು ರಾಜ್ಯಗಳ ಅನುಮತಿ ಪಡೆಯದೆಯೇ ತನಿಖೆ ನಡೆಸುವಅಧಿಕಾರವನ್ನು ಸಿಬಿಐ ಹೊಂದುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.