ADVERTISEMENT

ಸಿಬಿಐನಲ್ಲಿ ರಾಜಕೀಯ ಹಸ್ತಕ್ಷೇಪ ಇಲ್ಲ

ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರದ ಪ್ರಮಾಣಪತ್ರ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 19:59 IST
Last Updated 3 ಜುಲೈ 2013, 19:59 IST

ನವದೆಹಲಿ (ಐಎಎನ್‌ಎಸ್): ದೇಶದ ಪ್ರತಿಷ್ಠಿತ ಕೇಂದ್ರೀಯ ತನಿಖಾ ದಳವನ್ನು (ಸಿಬಿಐ) ಸರ್ಕಾರದ ನಿಯಂತ್ರಣದಿಂದ ಹೊರಗಿಡಲು ಮತ್ತು ರಾಜಕೀಯ ಹಸ್ತಕ್ಷೇಪ ತಡೆಯುವ ಉದ್ದೇಶದಿಂದ ಸಿಬಿಐ ನಿರ್ದೇಶಕರ ನೇಮಕಾತಿ ಶಿಫಾರಸು ವಿಶೇಷ ಅಧಿಕಾರವನ್ನು ಇನ್ನು ಮುಂದೆ ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಸಮಿತಿ ನಿರ್ವಹಿಸಲಿದೆ.

ಸುಪ್ರೀಂಕೋರ್ಟ್‌ಗೆ ಬುಧವಾರ ಸಲ್ಲಿಸಿದ 41 ಪುಟಗಳ ಪ್ರಮಾಣಪತ್ರದಲ್ಲಿ ಈ ವಿಷಯವನ್ನು ತಿಳಿಸಿರುವ ಕೇಂದ್ರ ಸರ್ಕಾರ, ಸಿಬಿಐ ಸ್ವಾಯತ್ತತೆ ಕಾಪಾಡಲು ಕೈಗೊಂಡಿರುವ ಇತರ ಕ್ರಮಗಳ ಕುರಿತು ವಿವರಣೆ ನಿಡಿದೆ.

ಪ್ರಧಾನಿ ನೇತೃತ್ವದ ಉನ್ನತಾಧಿಕಾರ ಸಮಿತಿಯು ಲೋಕಸಭಾ ವಿರೋಧ ಪಕ್ಷದ ನಾಯಕ, ಸುಪ್ರೀಂಕೊರ್ಟ್ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ಹೆಸರಿಸುವ ನ್ಯಾಯಮೂರ್ತಿಯನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ದೆಹಲಿ ವಿಶೇಷ ಪೊಲೀಸ್ ಸ್ಥಾನಿಕ ಕಾಯ್ದೆಗೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದೆ.

ಸೇವಾ ಜೇಷ್ಠತೆ, ಅನುಭವ, ದಕ್ಷತೆ, ಬದ್ಧತೆಯನ್ನು ಗಮನದಲ್ಲಿಟ್ಟುಕೊಂಡು ಅರ್ಹ ಐಪಿಎಸ್ ಅಧಿಕಾರಿಯನ್ನು ಸಿಬಿಐ ನಿರ್ದೇಶಕರ ಹುದ್ದೆಗೆ ಶಿಫಾರಸು ಮಾಡಲಾಗುವುದು. ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣಗಳ ತನಿಖೆಯಲ್ಲಿ ಗಳಿಸಿದ ಅನುಭವವನ್ನು ಪ್ರಮುಖವಾಗಿ ಗಣನೆಗೆ ತೆಗೆದುಕೊಳ್ಳಲಾಗುವುದು. ಸಿಬಿಐ ನಿರ್ದೇಶಕರ ಅಧಿಕಾರದ ಅವಧಿಯನ್ನು ಕನಿಷ್ಠ ಎರಡು ವರ್ಷಗಳಿಗೆ ನಿಗದಿ ಮಾಡಲಾಗಿದೆ. 

`ಸರ್ಕಾರಕ್ಕೆ ಸಿಬಿಐ ಸಲ್ಲಿಸಿದ್ದ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದ ತನಿಖಾ ವರದಿಯನ್ನು ಕೇಂದ್ರದ ಅಂದಿನ ಕಾನೂನು ಸಚಿವ ಅಶ್ವನಿ ಕುಮಾರ್, ಪ್ರಧಾನಿ ಕಚೇರಿ ಮತ್ತು ಕಲ್ಲಿದ್ದಲು ಸಚಿವಾಲಯದ ಹಿರಿಯ ಅಧಿಕಾರಿಗಳು ಪರಿಶೀಲಿಸಿದ್ದರು' ಎಂದು ಸಿಬಿಐ ನಿರ್ದೇಶಕರು ಸುಪ್ರೀಂಕೋರ್ಟ್‌ನಲ್ಲಿ ಹೇಳಿಕೆ ನೀಡಿದ್ದರು. ಇದು ಭಾರಿ ಕೋಲಾಹಲಕ್ಕೆ ಕಾರಣವಾಗಿತ್ತು.

ಈ ಹಿನ್ನೆಲೆಯಲ್ಲಿ ಸ್ವತಂತ್ರ ತನಿಖಾ ಸಂಸ್ಥೆ ಸಿಬಿಐ ಸ್ವಾಯತ್ತತೆ ರಕ್ಷಣೆ ಮತ್ತು ರಾಜಕೀಯ ಹಸ್ತಕ್ಷೇಪ ತಡೆಯುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ಎಂದು ತಿಳಿಸುವಂತೆ ಸುಪ್ರೀಂಕೋರ್ಟ್, ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.