ADVERTISEMENT

ಸಿಬಿಐ ಕಸ್ಟಡಿಗೆ ಕಾರ್ತಿ

ಪಿಟಿಐ
Published 1 ಮಾರ್ಚ್ 2018, 19:39 IST
Last Updated 1 ಮಾರ್ಚ್ 2018, 19:39 IST
ಸಿಬಿಐ ಕಸ್ಟಡಿಗೆ ಕಾರ್ತಿ
ಸಿಬಿಐ ಕಸ್ಟಡಿಗೆ ಕಾರ್ತಿ   

ನವದೆಹಲಿ: ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ ಮಗ ಕಾರ್ತಿ ಅವರನ್ನು ಇದೇ 6ರವರೆಗೆ ದೆಹಲಿಯ ನ್ಯಾಯಾಲಯವೊಂದು ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.

ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಕಾರ್ತಿ ಅವರನ್ನು ಸಿಬಿಐ ಬುಧವಾರ ಚೆನ್ನೈಯಲ್ಲಿ ಬಂಧಿಸಿತ್ತು. ಅವರನ್ನು ಒಂದು ದಿನದ ಸಿಬಿಐ ಕಸ್ಟಡಿಗೆ ಒಪ್ಪಿಸಲಾಗಿತ್ತು. ವಿಶೇಷ ನ್ಯಾಯಾಧೀಶ ಸುನಿಲ್‌ ರಾಣಾ ಅವರ ಮುಂದೆ ಗುರುವಾರ ಅವರನ್ನು ಹಾಜರುಪಡಿಸಲಾಯಿತು. ಕಾರ್ತಿಯನ್ನು ನ್ಯಾಯಾಧೀಶರು ಐದು ದಿನಗಳ ಕಸ್ಟಡಿಗೆ ಒಪ್ಪಿಸಿದರು.

ಕಾರ್ತಿ ವಿದೇಶಕ್ಕೆ ಹೋಗಿದ್ದಾಗ ಎಸಗಿದ ಕೃತ್ಯಗಳ ಆಘಾತಕಾರಿ ಸಾಕ್ಷ್ಯಗಳಿವೆ. ಹಣ ಸ್ವೀಕರಿಸಿದ ವಿದೇಶಿ ಬ್ಯಾಂಕ್‌ ಖಾತೆಗಳನ್ನು ಅವರು ಮುಚ್ಚಿದ್ದಾರೆ ಎಂದು ಸಿಬಿಐ ಆರೋಪಿಸಿತು. ಇದು ರಾಜಕೀಯ ದ್ವೇಷದ ಪ್ರಕರಣ ಅಲ್ಲ, ಸಂವಿಧಾನ ಪ್ರಕಾರವೇ ತನಿಖೆ ನಡೆಯುತ್ತಿದೆ ಎಂದು ಸಿಬಿಐ ಪರವಾಗಿ  ಹಾಜರಾದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದರು. ವಿಚಾರಣೆ ಸಂದರ್ಭದಲ್ಲಿ ಚಿದಂಬರಂ ಮತ್ತು ಅವರ ಹೆಂಡತಿ ನಳಿನಿ ಇದ್ದರು. ಈ ಇಬ್ಬರೂ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲರು.

ADVERTISEMENT

ಬುಧವಾರ ಬಂಧನಕ್ಕೆ ಒಳಗಾದ ಬಳಿಕ ಯಾವುದೇ ಆರೋಗ್ಯ ತೊಂದರೆ ಇದೆ ಎಂದು ಕಾರ್ತಿ ಹೇಳಿರಲಿಲ್ಲ. ಹಾಗಿದ್ದರೂ ಸಫ್ದರ್‌ಜಂಗ್‌ ಆಸ್ಪತ್ರೆಯ ವೈದ್ಯರು ಅವರನ್ನು ಬುಧವಾರ ರಾತ್ರಿ ಹೃದ್ರೋಗ ಆರೈಕೆ ಕೇಂದ್ರಕ್ಕೆ ಕಳುಹಿಸಿದ್ದರು. ಗುರುವಾರ ಬೆಳಿಗ್ಗೆ ಅವರನ್ನು ಸಿಬಿಐ ಕಚೇರಿಗೆ ಕರೆತರಲಾಯಿತು. ಬುಧವಾರ ಸಂಜೆ 7.30ಕ್ಕೆ ಕಾರ್ತಿಯನ್ನು ಸಿಬಿಐ ವಶಕ್ಕೆ ಕೊಡಲಾಗಿತ್ತು. ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರಿಂದ ತನಿಖೆ ನಡೆಸಲು ಸಾಧ್ಯವಾಗಲಿಲ್ಲ ಎಂದು ಮೆಹ್ತಾ ತಿಳಿಸಿದರು.

ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಅವರ ನೇತೃತ್ವದ ವಕೀಲರ ತಂಡ ಕಾರ್ತಿ ಪರವಾಗಿ ವಾದಿಸಿತು. 2017ರ ಮೇಯಲ್ಲಿ ಕಾರ್ತಿ ಅವರನ್ನು ಸಿಬಿಐ ಸುಮಾರು 22 ತಾಸುವಿಚಾರಣೆಗೆ ಒಳಪಡಿಸಿದೆ. 2017ರ ಆಗಸ್ಟ್‌ ಬಳಿಕ ಈವರೆಗೆ ಅವರಿಗೆ ಯಾವುದೇ ನೋಟಿಸ್‌ ನೀಡಿಲ್ಲ. ಕಾರ್ತಿ ಅವರಲ್ಲಿ ಏನನ್ನೂ ಕೇಳುವುದಕ್ಕೆ ಇಲ್ಲ ಎಂಬುದೇ ಇದರ ಅರ್ಥ ಎಂದು ಸಿಂಘ್ವಿ ಹೇಳಿದರು.

‘ಸಹಕಾರ ನೀಡುತ್ತಿಲ್ಲ ಎಂಬುದನ್ನು ಸಾಬೀತು ಮಾಡುವ ಏಕೈಕ ವಿಧಾನ ಎಂದರೆ ನೋಟಿಸ್‌ ಕೊಟ್ಟು ನೋಡುವುದು. ಆದರೆ ನೋಟಿಸನ್ನೇ ನೀಡದೆ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೇಗೆ ಹೇಳಲು ಸಾಧ್ಯ? ಆರು ತಿಂಗಳ ಬಳಿಕ ಬಂಧಿಸಲಾಗಿದೆ. ಇದು ವಿಚಿತ್ರ. ವಿಮಾನದಿಂದ ಹೊರಗೆ ಬರುತ್ತಿದ್ದಂತೆಯೇ ಅವರನ್ನು ಬಂದಿಸಲಾಗಿದೆ.

ಕಾರ್ತಿ ವಿರುದ್ಧ ಅಣುವಿನಷ್ಟೂ ಪುರಾವೆ ಇಲ್ಲ. ನ್ಯಾಯಾಲಯದ ಎಲ್ಲ ಆದೇಶಗಳನ್ನು ಪಾಲಿಸಿದ್ದರೂ ಬಂಧಿಸಲಾಗಿದೆ’ ಎಂದು ಸಿಂಘ್ವಿ ವಾದಿಸಿದರು.

ಸಿಬಿಐ ಪ್ರತಿಪಾದನೆ

ಐಎನ್‌ಎಸ್ ಮೀಡಿಯಾ ಪ್ರಕರಣ

* ಐಎನ್‌ಎಕ್ಸ್‌ ಮೀಡಿಯಾ ಕಂಪನಿಗೆ ವಿದೇಶಿ ಬಂಡವಾಳ ಉತ್ತೇಜಕ ಮಂಡಳಿಯು (ಎಫ್‌ಐಪಿಬಿ) ಅನುಮತಿ ನೀಡುವಲ್ಲಿ ಕಾರ್ತಿ ಚಿದಂಬರಂ ಪ್ರಭಾವ ಬೀರಿದ್ದಾರೆ

* ಎಫ್‌ಐಪಿಬಿಯಿಂದ ಅನುಮತಿ ಕೊಡಿಸಿದ್ದಕ್ಕಾಗಿ ಸುಮಾರು ₹ 65 ಕೋಟಿ (10 ಲಕ್ಷ ಅಮೆರಿಕನ್ ಡಾಲರ್) ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕಾರ್ತಿ

* ಕಾರ್ತಿ ‘ವಿದೇಶಿ ವ್ಯವಹಾರ’ಗಳಿಗೆ ನೆರವಾಗಿ ಎಂದು ಐಎನ್‌ಎಕ್ಸ್ ಮೀಡಿಯಾ ಮಾಲೀಕರಿಗೆ ಪಿ.ಚಿದಂಬರಂ ಅವರಿಂದ ಸೂಚನೆ

ಏರ್‌ಸೆಲ್–ಮ್ಯಾಕ್ಸಿಸ್ ಪ್ರಕರಣ

* ಏರ್‌ಸೆಲ್–ಮ್ಯಾಕ್ಸಿಸ್ ಕಂಪನಿಗೆ ನಿಯಮಬಾಹಿರವಾಗಿ ಅನುಮತಿ ನೀಡಿದ ಎಫ್‌ಐಪಿಬಿ

* ಎಫ್‌ಐಪಿಬಿ ಅನುಮತಿ ನೀಡುವಲ್ಲಿ ಚಿದಂಬರಂ ಪ್ರಭಾವ ಇರುವ ಬಗ್ಗೆ ಶಂಕೆ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ

* ₹ 600 ಕೋಟಿಗಿಂತಲೂ ಹೆಚ್ಚಿನ ಮೊತ್ತದ ಪ್ರಸ್ತಾವಗಳಿಗೆ ಹಣಕಾಸು ಸಚಿವರ ಅಂಕಿತ ಹಾಕಿಸುವುದು ಸರಿಯಲ್ಲ ಎಂದಿರುವ ಸಿಬಿಐ

* ಅಂದಿನ ದೂರಸಂಪರ್ಕ ಸಚಿವ ದಯಾನಿಧಿ ಮಾರನ್ ವಿರುದ್ಧ 2014ರಲ್ಲಿ ಆರೋಪ ಪಟ್ಟಿ ಸಲ್ಲಿಸಿದ ಜಾರಿ ನಿರ್ದೇಶನಾಲಯ

ಲಂಡನ್‌ನಿಂದ ಧಾವಿಸಿದ ಚಿದಂಬರಂ

ಆಕ್ಸ್‌ಫರ್ಡ್‌ ವಿದ್ಯಾರ್ಥಿ ಸಂಘದ ಸಂವಾದದಲ್ಲಿ ಭಾಗವಹಿಸಲು ಲಂಡನ್‌ಗೆ ಹೋಗಿದ್ದ ಚಿದಂಬರಂ, ಮಗ ಕಾರ್ತಿ ಬಂಧನದ ಸುದ್ದಿ ತಿಳಿಯುತ್ತಲೇ ತಮ್ಮೆಲ್ಲ ಕಾರ್ಯಕ್ರಮ ರದ್ದುಪಡಿಸಿ ಭಾರತಕ್ಕೆ ಧಾವಿಸಿದ್ದಾರೆ. ಬಂಧನದ ಬಳಿಕ ಮೊದಲ ಬಾರಿಗೆ ನ್ಯಾಯಾಲಯದಲ್ಲಿ ಮಗನನ್ನು ಭೇಟಿಯಾದ ಅವರು ‘ಚಿಂತೆ ಬೇಡ, ನಾನಿದ್ದೇನೆ’ ಎಂದರು.

‘ಕಸ್ಟಡಿಯಲ್ಲಿರುವುದು ನೀವು ನಾವಲ್ಲ’

ನ್ಯಾಯಾಲಯದಲ್ಲಿದ್ದಾಗ ಕಾರ್ತಿ ತಮ್ಮ ಗೆಳೆಯರೊಬ್ಬರ ಜತೆಗೆ ತಮಿಳಿನಲ್ಲಿ ಮಾತನಾಡಿದರು. ತಕ್ಷಣವೇ ಸಿಬಿಐ ಅಧಿಕಾರಿಯೊಬ್ಬರು ಇಂಗ್ಲಿಷ್‌ನಲ್ಲಿ ಮಾತನಾಡುವಂತೆ ಸೂಚಿಸಿದರು. ಅದಕ್ಕೆ ಉತ್ತರ ನೀಡಿದ ಕಾರ್ತಿ, ‘ನಾನು ಇರುವಾಗ ನೀವು ಕೂಡ ಪರಸ್ಪರ ಇಂಗ್ಲಿಷ್‌ನಲ್ಲಿಯೇ ಮಾತನಾಡಬೇಕು’ ಎಂದರು. ತೀಕ್ಷ್ಣ ತಿರುಗೇಟು ನೀಡಿದ ಅಧಿಕಾರಿ ‘ಕಸ್ಟಡಿಯಲ್ಲಿರುವುದು ನೀವು, ನಾವಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.