ADVERTISEMENT

ಸಿಬಿಐ ತನಿಖೆ ಶಿಫಾರಸಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 19:30 IST
Last Updated 18 ಫೆಬ್ರುವರಿ 2012, 19:30 IST

ನವದೆಹಲಿ: ರಾಜ್ಯ ಸರ್ಕಾರದಿಂದ ಲಾಭ ಪಡೆಯಲು `ಜಿಂದಾಲ್ ಸ್ಟೀಲ್ಸ್~ (ಜೆಎಸ್‌ಡಬ್ಲ್ಯು)  ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರರ `ಪ್ರೇರಣಾ ಟ್ರಸ್ಟ್~ಗೆ ನೀಡಿದ `ದೇಣಿಗೆ~ ಹಾಗೂ `ಧವಳಗಿರಿ ಡೆವಲಪರ್ಸ್‌~ಗೆ ಸರ್ಕಾರದ ಮಾರ್ಗಸೂಚಿ ದರಕ್ಕಿಂತ  ಅಧಿಕ ಹಣ ಪಾವತಿಸಿ `ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ~ (ಎಸ್‌ಡಬ್ಲ್ಯುಎಂಸಿ)ಗೆ ಭೂಮಿ ಖರೀದಿಸಿದ ಆರೋಪ ಕುರಿತು ಸಿಬಿಐ ತನಿಖೆಗೆ ಶಿಫಾರಸು ಮಾಡಬೇಕೆಂದು `ಸಮಾಜ ಪರಿವರ್ತನಾ ಸಮುದಾಯ~ (ಎಸ್‌ಪಿಎಸ್) ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ಮನವಿ ಮಾಡಿತು.

ಬೇಲಿಕೇರಿ ಬಂದರಿನಲ್ಲಿ ವಶಪಡಿಸಿಕೊಂಡಿದ್ದ 5.5ಲಕ್ಷ ಟನ್ ಅಕ್ರಮ ಅದಿರನ್ನು ಕಳವು ಮಾಡಿ ಸಾಗಿಸಲಾಗಿದೆ. ಈ ಪ್ರಕರಣದಲ್ಲಿ `ಅದಾನಿ ಎಂಟರ್ ಪ್ರೈಸಸ್~ ಕೈವಾಡವಿದ್ದು ಇದನ್ನು ಕೂಡ ಸಿಬಿಐ ತನಿಖೆ ಒಪ್ಪಿಸಬೇಕೆಂದು ಮನವಿ ಸಲ್ಲಿಸಲಾಗಿದೆ. ಈ ಅದಿರನ್ನು ಬಳ್ಳಾರಿ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಹೊರ ತೆಗೆಯಲಾಗಿದೆ ಎಂದು ಎಸ್‌ಪಿಎಸ್ ವಾದಿಸಿದೆ.

ಅಕ್ರಮ ಗಣಿಗಾರಿಕೆ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್, ಈಚೆಗೆ ಮಾಜಿ ಮುಖ್ಯಮಂತ್ರಿ ವಿರುದ್ಧ ಸಿಬಿಐ ತನಿಖೆ ಅಗತ್ಯವಿದೆಯೇ ಎಂಬುದನ್ನು ಪರಿಶೀಲಿಸಿ ಎರಡು ವಾರದಲ್ಲಿ ಅಗತ್ಯ ಶಿಫಾರಸು ಮಾಡುವಂತೆ ಕೇಂದ್ರ ಉನ್ನತಾಧಿಕಾರ ಸಮಿತಿಗೆ ಸೂಚನೆ ನೀಡಿದೆ.

ಜಿಂದಾಲ್ ಸ್ಟೀಲ್ಸ್, ಸೌತ್‌ವೆಸ್ಟ್ ಮೈನಿಂಗ್ ಕಂಪೆನಿ ಮತ್ತು ಮಾಜಿ ಮುಖ್ಯಮಂತ್ರಿ ಕುಟುಂಬದ ಅಪವಿತ್ರ ಮೈತ್ರಿ ಕುರಿತು ಸಿಬಿಐ ತನಿಖೆ ನಡೆಸುವಂತೆ ಧಾರವಾಡದ ಎಸ್‌ಪಿಎಸ್‌ನ ಹಿರಿಯ ಸಲಹೆಗಾರ ಎಸ್.ಆರ್.ಹಿರೇಮಠ ಅವರು ಮಧ್ಯಂತರ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ, ಈ ಕುರಿತು ವಿಚಾರಣೆ ನಡೆಸಿ ವರದಿ ನೀಡುವಂತೆ ನ್ಯಾಯಾಲಯ ಸಿಇಸಿಗೆ ನಿರ್ದೇಶನ ನೀಡಿತ್ತು.

ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯಾ ನೇತೃತ್ವದ ಅರಣ್ಯ ಪೀಠದ ಮುಂದೆ ಅಕ್ರಮ ಗಣಿಗಾರಿಕೆ ಪ್ರಕರಣ ಶುಕ್ರವಾರ ವಿಚಾರಣೆಗೆ ಬರಲಿದ್ದು, ಸಿಇಸಿ ಸಿಬಿಐ ತನಿಖೆ ಕುರಿತು ತನ್ನ ಶಿಫಾರಸು ಸಲ್ಲಿಸುವ ಸಾಧ್ಯತೆಯಿದೆ. ನ್ಯಾಯಾಲಯದ ಸೂಚನೆ ಹಿನ್ನೆಲೆಯಲ್ಲಿ ಪಿ.ವಿ. ಜಯಕೃಷ್ಣನ್ ನೇತೃತ್ವದ ಕೇಂದ್ರ ಉನ್ನತಾಧಿಕಾರ ಸಮಿತಿ ಹಿರೇಮಠ ಅವರ ಅಹವಾಲು ಆಲಿಸಿತು. ಈ ವಿಚಾರಣೆಗೆ ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ನೇತೃತ್ವದ ಅಧಿಕಾರಿಗಳ ತಂಡ ಹಾಜರಾಗಿತ್ತು.

ಉಕ್ಕು ಮತ್ತು ಗಣಿಗಾರಿಕೆ ಉದ್ಯಮದಲ್ಲಿ  ತೊಡಗಿರುವ ಕೆಲವು ಪ್ರತಿಷ್ಠಿತ ಕಂಪೆನಿಗಳು ಮತ್ತು ಪ್ರಭಾವಿ ರಾಜಕಾರಣಿ ಯಡಿಯೂರಪ್ಪ ಕುಟುಂಬದ `ವ್ಯವಹಾರ~ ಕುರಿತು ಲೋಕಾಯುಕ್ತ ತನಿಖಾ ತಂಡದ ಮುಖ್ಯಸ್ಥರಾಗಿದ್ದ ಡಾ.ಯು.ವಿ.ಸಿಂಗ್ ತನಿಖೆ    ನಡೆಸಿದ್ದಾರೆ. ಸಿಂಗ್ ವರದಿಯನ್ನು ಹಿಂದಿನ  ಲೋಕಾಯುಕ್ತ ಸಂತೋಷ್ ಹೆಗ್ಡೆ ಪರಿಶೀಲಿಸಿ ಸೂಕ್ತ  ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಸೂಚಿಸಿದ್ದಾರೆ. ಈ ದಾಖಲೆಗಳನ್ನು ನ್ಯಾಯಾಲಯಕ್ಕೂ ಸಲ್ಲಿಸಲಾಗಿದೆ ಎಂದು ಹಿರೇಮಠ ಸಿಇಸಿಗೆ ತಿಳಿಸಿದ್ದಾರೆ.

ಬೇಲಿಕೇರಿ ಬಂದರಿನಿಂದ ಅದಿರು ಕಳವು ಮಾಡಿದ ಆರೋಪಕ್ಕೆ ಒಳಗಾಗಿರುವ ಅದಾನಿ ಎಂಟರ್‌ಪ್ರೈಸಸ್ ಸುಂಕ ಇಲಾಖೆ ಅಧಿಕಾರಿಗಳು ಮತ್ತು ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಲಂಚ ಪಾವತಿ ಮಾಡಿದೆ. ಈ ಕಂಪೆನಿ ವಿರುದ್ಧವೂ ಹಿಂದಿನ ಲೋಕಾಯುಕ್ತರು ಕ್ರಮಕ್ಕೆ ಶಿಫಾರಸು ಮಾಡಿದ್ದಾರೆ. ಕಳುವಾದ ಅದಿರು ಜಿಂದಾಲ್ ಸ್ಟೀಲ್‌ಗೂ ಪೂರೈಕೆ ಆಗಿದೆ. ಈ ಅದಿರನ್ನು ಜನಾರ್ದನರೆಡ್ಡಿ ಒಡೆತನದ `ಅಸೋಸಿಯೇಟ್ ಮೈನಿಂಗ್ ಕಂಪೆನಿ~ ಸರಬರಾಜು ಮಾಡಿದೆ. ಎಎಂಸಿ ವ್ಯವಹಾರ ಕುರಿತು ಸಿಬಿಐ ತನಿಖೆ ನಡೆಯುತ್ತಿದೆ ಎಂದು ಅರ್ಜಿದಾರರು ಮನವಿಯಲ್ಲಿ ವಿವರಿಸಿದ್ದಾರೆ.

ರಾಜ್ಯ ಸರ್ಕಾರ ಈ ಪ್ರಕರಣವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಾದ ಜೀವನ್‌ಕುಮಾರ್ ಗಾಂವಕರ್ ಮತ್ತು ಪ್ರಣವ್ ಮೊಹಾಂತಿ ಅವರನ್ನು ವರ್ಗಾವಣೆ ಮಾಡಿದೆ. ಇವರನ್ನು ಈ ಹುದ್ದೆಗಳಿಗೆ ಮರು ನೇಮಕ ಮಾಡಬೇಕು.

ಅಕಸ್ಮಾತ್ ಅರಣ್ಯ ಪೀಠಕ್ಕೆ ಇದು ಸಾಧ್ಯವಾಗದಿದ್ದರೆ ಮಧ್ಯಂತರ ಅರ್ಜಿಯಲ್ಲಿ ಸೇರಿರುವ ಈ ಕೋರಿಕೆಯನ್ನು ಸುಪ್ರೀಂ ಕೋರ್ಟ್‌ನ ಪೊಲೀಸ್ ಸುಧಾರಣಾ ಪೀಠಕ್ಕೆ ವರ್ಗಾಯಿಸಬೇಕೆಂದು ಕೇಳಲಾಗಿದೆ.

ಲೋಕಾಯುಕ್ತ ತನಿಖೆ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ಆರಂಭಿಸಲು ಶಿಫಾರಸು ಮಾಡಬೇಕು. ಈ ತನಿಖೆ ಮೇಲ್ವಿಚಾರಣೆಗೆ `ವಿಶೇಷ ತನಿಖಾ ತಂಡ~ (ಎಸ್‌ಐಟಿ) ರಚಿಸಬೇಕು ಎಂದು ಮನವಿ ಮಾಡಲಾಗಿದೆ.  ಕರ್ನಾಟಕ ಹಾಗೂ ಆಂಧ್ರ ಗಡಿ ಗುರುತಿಸುವ ಕಾರ್ಯವನ್ನು ನಿರ್ದಿಷ್ಟ ಕಾಲಮಿತಿ ಹಾಕಿಕೊಂಡು ಪೂರ್ಣಗೊಳಿಸಲು ಉಭಯ ಸರ್ಕಾರಕ್ಕೆ ಆದೇಶ ನೀಡಬೇಕು ಎಂದು ಕೋರಲಾಗಿದೆ. ಗಣಿ ಕಂಪೆನಿಗಳ ಪ್ರತಿನಿಧಿಗಳು ಸಿಇಸಿ ಮುಂದೆ ಹಾಜರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.