ADVERTISEMENT

ಸಿವಿಸಿ ನೇಮಕದಲ್ಲಿ ಪಾರದರ್ಶಕತೆ ಇಲ್ಲ

ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ತರಾಟೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2014, 19:30 IST
Last Updated 18 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಮುಖ್ಯ ಜಾಗೃತಿ ಆಯುಕ್ತರು (ಸಿವಿಸಿ) ಮತ್ತು ಜಾಗೃತಿ ಆಯುಕ್ತರ (ಸಿವಿಸಿ) ನೇಮಕ ಪ್ರಕ್ರಿಯೆ­ಯಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಇದಕ್ಕೆ ಪ್ರತಿಕ್ರಿಯೆ­ಯಾಗಿ, ಕೋರ್ಟ್‌ನ ಗಮನಕ್ಕೆ ತಾರದೆ ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ ಎಂಬ ಭರವಸೆಯನ್ನು ಸರ್ಕಾರ ನೀಡಿದೆ.

ಪಾರದರ್ಶಕತೆ ಇಲ್ಲದೇ ಇರುವುದು ಸ್ವಜನಪಕ್ಷಪಾತತನಕ್ಕೆ ಕಾರಣವಾಗುತ್ತಿದೆ. ಈ ಹುದ್ದೆಗಳಿಗೆ ಯಾವಾಗಲೂ ಅಧಿಕಾರಿ­ಗಳನ್ನೇ ಯಾಕೆ ನೇಮಿಸಲಾಗುತ್ತಿದೆ ಮತ್ತು ಇತರರನ್ನು ಯಾಕೆ ನೇಮಿಸಲಾ­ಗುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಆರ್‌.ಎಂ. ಲೋಧಾ ನೇತೃತ್ವದ ಪೀಠ ಪ್ರಶ್ನಿಸಿದೆ. ನಾಲ್ಕು ಗೋಡೆಯ ಒಳಗೆ ನಡೆಯುವ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಜನರು ಟೀಕಿಸುತ್ತಾರೆ ಎಂದು ಪೀಠ ಹೇಳಿದೆ.

ದೇಶದಲ್ಲಿ ಪ್ರತಿಭಾವಂತರ ಪಡೆಯೇ ಇದೆ. ಆದರೆ ಅವರನ್ನು ಈ ಹುದ್ದೆಗಳಿಗೆ ಪರಿಗಣಿಸುವುದೇ ಇಲ್ಲ. ಇಂಥವರನ್ನು ಪರಿಗಣಿಸುವಂತೆ ಆಯ್ಕೆ ಪ್ರಕ್ರಿಯೆ ರೂಪಿ­ಸ­­ಬಾರದೇಕೆ ಎಂದೂ ನ್ಯಾಯಮೂರ್ತಿ­ಗಳಾದ ಕುರಿಯನ್‌ ಜೋಸೆಫ್‌ ಮತ್ತು ಆರ್‌.ಎಫ್‌. ನಾರಿಮನ್‌ ಅವರು ಸದಸ್ಯರಾಗಿರುವ ಪೀಠ ಪ್ರಶ್ನಿಸಿತು.

ಈ ಹುದ್ದೆಗೆ ಅರ್ಜಿ ಹಾಕುವ ಬದಲು ಕೇಂದ್ರ ಸರ್ಕಾರವೇ ನೇಮಿಸಬೇಕು ಎಂದು ಬಯಸುವ ಜನರು ಹೆಚ್ಚಿದ್ದಾರೆ. ಹಾಗಾಗಿ ಅರ್ಜಿ ಆಹ್ವಾನಿಸುವುದಕ್ಕೆ ಸಾಧ್ಯವಿಲ್ಲ. ಆಯ್ಕೆ ಪ್ರಕ್ರಿಯೆಗೆ ಕನಿಷ್ಠ ಒಂದು ತಿಂಗಳ ಅವಧಿ ಬೇಕಾಗುತ್ತದೆ. ಪೀಠದ ಗಮನಕ್ಕೆ ತಾರದೆ ಅಂತಿಮ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಹೇಳಿದರು.

ಕೇಂದ್ರ ಸರ್ಕಾರವು ಅಕ್ಟೋಬರ್‌ ಒಂಬತ್ತರೊಳಗೆ ಈ ಬಗ್ಗೆ ಪ್ರತಿಕ್ರಿಯೆ ಸಲ್ಲಿಸಬೇಕು ಎಂದು ಪೀಠ ಹೇಳಿತು. ಅಂತಿಮ ವಿಚಾರಣೆ ಅದೇ ತಿಂಗಳ 14ರಂದು ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.