ಪಟ್ನಾ (ಪಿಟಿಐ): ಬಿಹಾರದಲ್ಲಿ ಕಾಂಗ್ರೆಸ್‌ಗೆ ಸ್ಪರ್ಧಿಸುವುದಕ್ಕೆ 11 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲಾಗುವುದು ಮತ್ತು ಅದಕ್ಕೆ ಭಾನುವಾರಕ್ಕೆ ಮೊದಲು ಒಪ್ಪಿಗೆ ಸೂಚಿಸಬೇಕು ಎಂಬ ಗಡುವನ್ನು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ವಿಸ್ತರಿಸಿದ್ದಾರೆ.
ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮನವಿ ಮಾಡಿಕೊಂಡಿರುವ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಉತ್ತಮ ಸಾಧನೆ ದಾಖಲಿಸುವುದಾಗಿ ಭರವಸೆಯನ್ನೂ ನೀಡಿದ್ದಾರೆ.
ಪಟ್ನಾದಲ್ಲಿ ಭಾನುವಾರ ನಡೆದ ಆರ್‌ಜೆಡಿ ಸಂಸದೀಯ ಮಂಡಳಿ ಸಭೆಗೆ ಮೊದಲೇ ಸೀಟು ಹಂಚಿಕೆ ಪ್ರಸ್ತಾಪಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ಲಾಲು ಶನಿವಾರ ಗಡುವು ನೀಡಿದ್ದರು. ಈಗ ಸ್ವಲ್ಪ ಮೃದುವಾಗಿರುವ ಅವರು ಕಾಂಗ್ರೆಸ್‌ಗೆ 11 ಮತ್ತು ಎನ್‌ಸಿಪಿಗೆ 1 ಕ್ಷೇತ್ರ ನೀಡಿಕೆ ಪ್ರಸ್ತಾಪವನ್ನು ಒಪ್ಪುವಂತೆ ವಿನಂತಿ ಮಾಡಿದ್ದಾರೆ. ಬಿಹಾರದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿವೆ.
12 ಕ್ಷೇತ್ರಗಳನ್ನು ಬಿಟ್ಟು ಕೊಡುವ ಪ್ರಸ್ತಾಪವನ್ನು ಸಮರ್ಥಿಸಿಕೊಂಡ ಲಾಲು, ಸ್ಪರ್ಧಿಸಲು ಬಯಸುವ ತಮ್ಮ ಪಕ್ಷದ ನಾಯಕರು ಮತ್ತು ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕಾಗಿದೆ ಎಂದರು.
ಕೋಮುವಾದಿ ಶಕ್ತಿಗಳು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದನ್ನು ತಡೆಯುವುದಾಗಿ ಲಾಲು ಹೇಳಿದರು.
ಇದು ತನ್ನೊಬ್ಬನ ಜವಾಬ್ದಾರಿ ಮಾತ್ರ ಅಲ್ಲ. ಇತರರೂ ಅದಕ್ಕೆ ಸಹಕರಿಸಬೇಕು ಎಂದು ಹೇಳುವ ಮೂಲಕ ಪ್ರಸ್ತಾಪ ಒಪ್ಪಿಕೊಳ್ಳುವಂತೆ ಕಾಂಗ್ರೆಸ್ ಮೇಲೆ ಪರೋಕ್ಷ ಒತ್ತಡವನ್ನೂ ಹೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.