ರಾಯಪುರ (ಪಿಟಿಐ): ಜಿಲ್ಲಾಧಿಕಾರಿ ಅಲೆಕ್ಸ್ ಪಾಲ್ ಮೆನನ್ ಅವರನ್ನು ಮಾವೋವಾದಿ ನಕ್ಸಲೀಯರು ಅಪಹರಿಸಿರುವ ಪ್ರಕರಣದ ಪರಿಶೀಲನೆಗಾಗಿ ಮುಖ್ಯಮಂತ್ರಿ ರಮಣ್ ಸಿಂಗ್ ಅಧ್ಯಕ್ಷತೆಯಲ್ಲಿ ಉಪ ಸಮಿತಿಯೊಂದರನ್ನು ರಚಿಸಲು ಛತ್ತೀಸ್ ಗಡ ಸರ್ಕಾರ ಸೋಮವಾರ ತೀರ್ಮಾನಿಸಿದೆ.
ಮುಖ್ಯಮಂತ್ರಿಯವರ ನಿವಾಸದಲ್ಲಿ ಕಳೆದ ರಾತ್ರಿ ನಡೆದ ತುರ್ತು ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕೃತ ಮೂಲಗಳು ಪಿಟಿಐಗೆ ತಿಳಿಸಿವೆ.
2006ರ ತಂಡದ ಐಎಎಸ್ ಅಧಿಕಾರಿ ಮೆನನ್ ಬಿಡುಗಡೆಗೆ ತಮ್ಮ 8 ಮಂದಿ ಸಹೋದ್ಯೋಗಿಗಳನ್ನು ಬಿಡುಗಡೆ ಮಾಡಬೇಕು ಎಂಬುದಾಗಿ ಆಗ್ರಹಿಸಿರುವ ನಕ್ಸಲೀಯರು ಬೇಡಿಕೆ ಈಡೇರಿಕೆಗೆ ಏಪ್ರಿಲ್ 24ರ ಗಡುವು ವಿಧಿಸಿದ್ದನ್ನು ಅನುಸರಿಸಿ ಕಳೆದ ರಾತ್ರಿ ತುರ್ತು ಸಭೆ ನಡೆಯಿತು ಎಂದು ಮೂಲಗಳು ಹೇಳಿವೆ.
ರಾಜ್ಯ ಗೃಹ ಸಚಿವ ನಂಕಿ ರಾಮ್ ಕನ್ವರ್, ಗುಡ್ಡಗಾಡು ಕಲ್ಯಾಣ ಸಚಿವ ಕೇದಾರ ಕಶ್ಯಪ್, ಜಲ ಸಂಪನ್ಮೂಲ ಸಚಿವ ರಾಮ್ವಿಚಾರ್ ನೇತಂ ಮತ್ತು ಶಾಲಾ ಶಿಕ್ಷಣ ಸಚಿವ ಬ್ರಿಜ್ ಮೋಹನ್ ಅಗರ್ ವಾಲ್ ಉಪಸಮಿತಿಯ ಸದಸ್ಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಬಗ್ಗೆ ಚರ್ಚಿಸಲು ಶೀಘ್ರವೇ ಸರ್ವ ಪಕ್ಷ ಸಭೆ ನಡೆಸಲೂ ನಿರ್ಧರಿಸಲಾಗಿದೆ ಎಂದೂ ಮೂಲಗಳು ಹೇಳಿವೆ.
ಸುಕ್ಮಾ ಜಿಲ್ಲಾಧಿಕಾರಿಯ ಬಿಡುಗಡೆಗೆ ಬದಲಾಗಿ ಛತ್ತೀಸ್ ಗಡ ಸೆರೆಮನೆಯಲ್ಲಿ ಇರುವ ತಮ್ಮ ಎಂಟು ಮಂದಿ ನಾಯಕರನ್ನು ಬಿಡುಗಡೆ ಮಾಡಬೇಕು ಮತ್ತು ~ಗ್ರೀನ್ ಹಂಟ್ ಕಾರ್ಯಾಚರಣೆ~ಯನ್ನು ಸ್ಥಗಿತಗೊಳಿಸಬೇಕು ಎಂಬುದಾಗಿ ಭಾನುವಾರ ಮಾವೋವಾದಿ ನಕ್ಸಲೀಯರು ಬೇಡಿಕೆ ಮುಂದಿಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.