ADVERTISEMENT

ಸುಗ್ರೀವಾಜ್ಞೆಗೆ ಸಹಿಹಾಕದಂತೆ ಸಿಪಿಎಂ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2014, 19:30 IST
Last Updated 2 ಮಾರ್ಚ್ 2014, 19:30 IST

ನವದೆಹಲಿ (ಐಎಎನ್ಎಸ್): ರಾಜಕೀಯ ಹಿತಾಸಕ್ತಿಯಿಂದ ಕೇಂದ್ರ ಸಂಪುಟ ಹೊರಡಿಸಲು ತಯಾರಾಗಿರುವ ಕೆಲವು ಸುಗ್ರೀವಾ­ಜ್ಞೆಗಳಿಗೆ ಸಹಿಹಾಕದಂತೆ ಭಾನುವಾರ ಸಿಪಿಎಂ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರನ್ನು ಒತ್ತಾಯಿಸಿದೆ.

ಸಂಪುಟವು ಈ ಸುಗ್ರೀವಾಜ್ಞೆಗಳನ್ನು ರಾಜಕೀಯ ಹಿತಾಸಕ್ತಿಗಾಗಿ ಬಳಸಬಹು­ದೆಂದು ಶಂಕೆ ವ್ಯಕ್ತಪಡಿಸಿರುವ ಸಿಪಿಎಂ, ‘ಈಚೆಗೆ ಮುಕ್ತಾಯವಾದ ಸಂಸತ್ತಿನ ಅಧಿವೇಶನದಲ್ಲಿ ಕೈಗೆತ್ತಿಕೊಳ್ಳದ ಅನೇಕ ಮಸೂದೆಗಳನ್ನು ಕೇಂದ್ರ ಸಂಪುಟ ಈಗ ಪರಿಗಣಿಸುತ್ತಿದೆಯೆಂದು’ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಪ್ರಣವ್ ಮುಖರ್ಜಿಯವರಿಗೆ ಬರೆದಿರುವ ಪತ್ರದಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.

ಆಂಧ್ರ ಪ್ರದೇಶದಿಂದ ಪ್ರತ್ಯೇಕಗೊಂಡಿರುವ ತೆಲಂಗಾಣ ರಾಜ್ಯಕ್ಕೆ  ಅಂಗೀಕಾರ ನೀಡುವ   ಆಂಧ್ರ ಪ್ರದೇಶ ಪುನರ್ ಸಂಘಟನಾ ಕಾಯ್ದೆಗೆ ರಾಷ್ಟ್ರಪತಿಯವರು  ಈಗಾಗಲೆ ಸಹಿ ಹಾಕಿದ್ದು, ಸಂಪುಟವು ಅದರಲ್ಲಿ ಕೆಲವು ತಿದ್ದುಪಡಿ ತರಬಹುದೆಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

‘ಈ ಸಂಶಯ ನಿಜವಾದಲ್ಲಿ ಇದು ಪ್ರಜಾಪ್ರಭುತ್ವದ ಅಣಕ ಮತ್ತು ಆಘಾತಕಾರಿಯಾದ ಅಸಾಂವಿಧಾನಿಕ ಕ್ರಮವಾಗಲಿದೆ’ ಎಂದು ಅವರು ಹೇಳಿದ್ದಾರೆ.

‘ಭ್ರಷ್ಟಾಚಾರ ನಿಗ್ರಹಿಸುವುದಕ್ಕೆ ಸಂಬಂಧಿಸಿದ ಮಸೂದೆಗಳನ್ನು ಕುರಿತು ಕಳೆದ ಐದು ವರ್ಷಗಳಲ್ಲಿ ಏನೂ ಮಾಡದ ಸರ್ಕಾರ ಈಗ ಸುಗ್ರೀವಾಜ್ಞೆ ದಾರಿ ಹಿಡಿದಿದೆ. ಸರ್ಕಾರ ಸುಲಭವಾಗಿ ಅಧಿವೇಶನವನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಇವುಗಳನ್ನು ಚರ್ಚಿಸಿ ಅಂಗೀಕರಿಸಬಹುದಿತ್ತು ಎಂದು ಕಾರಟ್ ಹೇಳಿದ್ದಾರೆ.

ಸಂಸತ್ತಿನ ಅಧಿವೇಶನ ಮುಗಿದ ಮೇಲೆ ಆಡಳಿತ ಪಕ್ಷದ ಹಿತಾಸಕ್ತಿಗೆ ಪೂರಕವಾಗುವಂತೆ ಮತ್ತು ಚುನಾವಣೆ ಘೋಷಣೆಯಾಗಲಿರುವ ಸಂದರ್ಭ­ದಲ್ಲಿ ಸುಗ್ರೀವಾಜ್ಞೆ ಹೊರಡಿಸುವುದು ‘ಪ್ರಜಾಪ್ರಭುತ್ವ ವಿರೋಧಿ ಮತ್ತು ಪಕ್ಷಪಾತದ ಕ್ರಿಯೆ’ಎಂದು ಸಿಪಿಐಎಂನ ನಾಯಕರು ಹೇಳಿದ್ದಾರೆ.

ದೀರ್ಘ­ಕಾಲದ ಸಾರ್ವಜನಿಕ ಬದುಕಿನಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಪ್ರಕ್ರಿಯೆ ಬಗ್ಗೆ ಅನುಭವ, ವಿವೇಚನೆ ಇರುವ ರಾಷ್ಟ್ರಪತಿಯವರು ಅವುಗಳನ್ನು ಉಲ್ಲಂಘಿಸುವ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂಬ ಭರವಸೆ ತಮಗಿರುವುದಾಗಿ ಕಾರಟ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.