ADVERTISEMENT

ಸುಡುಮದ್ದಿನಿಂದ ಸುಧಾರಿತ ಬಾಂಬ್ : ಭಯೋತ್ಪಾದಕರಿಗೆ ತರಬೇತಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ನವದೆಹಲಿ (ಪಿಟಿಐ): ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಪಟಾಕಿಯ ಸುಡುಮ್ದ್ ದು ಮತ್ತು ಇತರ ರಾಸಾಯನಿಕಗಳನ್ನು ಬಳಸಿ ಸುಧಾರಿತ, ಶಕ್ತಿಶಾಲಿ ಸ್ಫೋಟಕ ಸಿದ್ಧಪಡಿಸುವ ತರಬೇತಿಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹಾಗೂ ಬೇಹುಗಾರಿಕಾ ಸಂಸ್ಥೆ ಐಎಸ್‌ಐ ನೀಡುತ್ತಿವೆ ಎಂಬ ಮಾಹಿತಿ ಬಹಿರಂಗವಾಗಿದೆ.

ದೆಹಲಿ ಪೊಲೀಸರಿಗೆ ಇತ್ತೀಚೆಗೆ ಸೆರೆ ಸಿಕ್ಕ ಲಷ್ಕರ್- ಎ- ತೊಯ್ಬಾದ ಶಂಕಿತ ಭಯೋತ್ಪಾದಕ ಆಥೆಶಾಮ್ ಮಲಿಕ್, ವಿಚಾರಣೆಯ ವೇಳೆ ಈ ವಿಷಯವನ್ನು ಬಾಯ್ಬಿಟ್ಟಿದ್ದಾನೆ.

ತನ್ನ ಅಕ್ರಮ ಚಟುವಟಿಕೆಗಳಿಗೆ ವಾಘಾ ಗಡಿ ರೇಖೆಯನ್ನು ಬಳಸಿಕೊಳ್ಳುತ್ತಿರುವ ಪಾಕಿಸ್ತಾನ, ಅಲ್ಲಿಂದಲೇ ಕಾಶ್ಮೀರಿ ಯುವಕರನ್ನು ಕರೆದೊಯ್ದು ಈ ತರಬೇತಿ ನೀಡುತ್ತಿದೆ ಎಂದು ತಿಳಿಸಿದ್ದಾನೆ.    

ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುವ ಸುಡುಮದ್ದು, ವಿಜ್ಞಾನ ಪ್ರಯೋಗಾಲಯಗಳಲ್ಲಿ ಸಾಮಾನ್ಯವಾಗಿ ಬಳಸುವ ಸಾಮಗ್ರಿ ಮತ್ತು ರಾಸಾಯನಿಕ ಗಂಧಕಾಮ್ಲವನ್ನು ಬಳಸಿ ಸುಧಾರಿತ ಬಾಂಬ್ ತಯಾರಿಸುವ ತರಬೇತಿಯನ್ನು ಲಷ್ಕರ್-ಎ-ತೊಯ್ಬಾ ಮತ್ತು ಐಎಸ್‌ಐ ನೀಡುತ್ತಿವೆ.  ಕಳೆದ ಡಿಸೆಂಬರ್‌ನಲ್ಲಿ ಪಾಕಿಸ್ತಾನಕ್ಕೆ ತೆರಳಿದ್ದ 24 ವರ್ಷದ ಮಲಿಕ್‌ಗೆ ಮೂರು ವಾರಗಳ ಕಾಲ ಈ ತರಬೇತಿ ನೀಡಲಾಗಿತ್ತು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ ತಯಾರಿಸಲು ಸಾಮಾನ್ಯವಾಗಿ ಬಳಸುವ ಅಮೋನಿಯಂ ನೈಟ್ರೇಟ್ ಮಾರಾಟದ ಮೇಲೆ ಸರ್ಕಾರ ನಿಯಂತ್ರಣ ಹೇರಿದ ನಂತರ ಭಯೋತ್ಪಾದಕ ಸಂಘಟನೆಗಳು ಈ ಪರ್ಯಾಯ ಮಾರ್ಗ ಕಂಡುಕೊಂಡಿವೆ.

ಗಂಧಕಾಮ್ಲ ಮತ್ತು ಸುಡುಮದ್ದು ಹೊರತಾಗಿ ಸ್ಫೋಟಕಗಳನ್ನು ತಯಾರಿಸಲು ಸುಲಭವಾಗಿ ದೊರೆಯುವ ಇತರ ಸಾಮಗ್ರಿಗಳ ಹುಡುಕಾಟದಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳು ತೊಡಗಿವೆ ಎಂಬ ವಿಷಯವನ್ನು ಬಂಧಿತ ವಿಚಾರಣೆ ವೇಳೆ ಹೊರಗೆಡಹಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.