ADVERTISEMENT

ಸುನಂದಾ ಪುಷ್ಕರ್‌ ಸಾವಿನ ಪ್ರಕರಣ: ಪಿಐಎಲ್‌ ವೇಷದ ರಾಜಕೀಯ ಹಿತಾಸಕ್ತಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 19:30 IST
Last Updated 26 ಅಕ್ಟೋಬರ್ 2017, 19:30 IST
ಸುನಂದಾ ಪುಷ್ಕರ್‌ ಸಾವಿನ ಪ್ರಕರಣ: ಪಿಐಎಲ್‌ ವೇಷದ ರಾಜಕೀಯ ಹಿತಾಸಕ್ತಿ ಅರ್ಜಿ
ಸುನಂದಾ ಪುಷ್ಕರ್‌ ಸಾವಿನ ಪ್ರಕರಣ: ಪಿಐಎಲ್‌ ವೇಷದ ರಾಜಕೀಯ ಹಿತಾಸಕ್ತಿ ಅರ್ಜಿ   

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಪತ್ನಿ ಸುನಂದಾ ಪುಷ್ಕರ್‌ ಅವರ ಸಾವಿನ ಪ್ರಕರಣದ ತನಿಖೆಯನ್ನು ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ನಡೆಸಬೇಕು ಎಂದು ಕೋರಿ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ಗುರುವಾರ ವಜಾ ಮಾಡಿದೆ.

ಅಲ್ಲದೇ, ನ್ಯಾಯಮೂರ್ತಿಗಳಾದ ಎಸ್‌. ಮುರಳೀಧರ್‌ ಮತ್ತು ಐ.ಎಸ್‌. ಮೆಹ್ತಾ ಅವರಿದ್ದ ನ್ಯಾಯಪೀಠ ಸ್ವಾಮಿ ಅವರಿಗೆ ಛೀಮಾರಿ ಹಾಕಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ವೇಷದ ರಾಜಕೀಯ ಹಿತಾಸಕ್ತಿಯಿಂದ ಕೂಡಿರುವ ಅರ್ಜಿಗೆ ಇದು ಅತ್ಯುತ್ತಮ ಉದಾಹರಣೆ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ನ್ಯಾಯಪೀಠ ಹೇಳಿದೆ.

ADVERTISEMENT

ಸಾವಿನ ಪ್ರಕರಣವನ್ನು ಎಸ್‌ಐಟಿ ಸರಿಯಾಗಿ ತನಿಖೆ ನಡೆಸಿಲ್ಲ ಅಥವಾ ಯಾವುದೇ ರಾಜಕೀಯ ಪಕ್ಷ ತನಿಖೆಯ ಮೇಲೆ ಪ್ರಭಾವ ಬೀರಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ದಾಖಲೆಗಳನ್ನು ಆಧರಿಸಿ ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಕೇಂದ್ರದ ಮಾಜಿ ಸಚಿವ ತರೂರ್‌ ಮತ್ತು ದೆಹಲಿ ಪೊಲೀಸರ ವಿರುದ್ಧ ಯಾವ ಆಧಾರದ ಮೇಲೆ ಗಂಭೀರ ಆರೋಪಗಳನ್ನು ಮಾಡಲಾಗಿದೆ ಎಂಬ ಬಗ್ಗೆ ಸ್ವಾಮಿ ಅವರು ನ್ಯಾಯಾಲಯಕ್ಕೆ ಮಾಹಿತಿ ನೀಡಿಲ್ಲ ಎಂದು ಅದು ತಿಳಿಸಿದೆ.

‘ತಾನು ಯಾವುದೇ ಮಾಹಿತಿಯನ್ನು ಗೋಪ್ಯವಾಗಿಟ್ಟಿಲ್ಲ ಎಂದು ಸುಬ್ರಮಣಿಯನ್‌ ಸ್ವಾಮಿ ಹೇಳಿದ್ದರೂ ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದೀರಿ ಎಂದು ನಿರ್ದಿಷ್ಟವಾಗಿ ಕೇಳಿದಾಗ ಈ ಬಗ್ಗೆ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಮೊಕದ್ದಮೆ ದಾಖಲಿಸುವಾಗ ಯಾವುದನ್ನು ಬಹಿರಂಗ ಪಡಿಸಬೇಕಿತ್ತೋ, ಅದನ್ನು ಅವರು ಮಾಡಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿದೆ.

‘ರಾಜಕೀಯ ವ್ಯಕ್ತಿಗಳು ತಮ್ಮ ಸ್ವಉದ್ದೇಶಗಳಿಗಾಗಿ ನ್ಯಾಯಾಂಗ ವ್ಯವಸ್ಥೆಯನ್ನು ಬಳಸದಂತೆ ನ್ಯಾಯಾಲಯಗಳು ನೋಡಿಕೊಳ್ಳಬೇಕು. ಇದರರ್ಥ ರಾಜಕೀಯದಲ್ಲಿರುವವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಾರದು ಎಂದಲ್ಲ. ಆದರೆ, ರಾಜಕಾರಣಿಗಳು ಬೇರೆ ರಾಜಕೀಯ ವ್ಯಕ್ತಿಗಳ ವಿರುದ್ಧ ಆರೋಪ ಮಾಡಿದಾಗ ನ್ಯಾಯಾಲಯಗಳು ಹೆಚ್ಚು ಜಾಗರೂಕವಾಗಿರಬೇಕು’ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ 2014ರ ಜನವರಿ 17ರಂದು ನಡೆದ ಸುನಂದಾ ಅವರ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ಹೊಸದಾಗಿ ನಡೆಸಬೇಕು ಎಂದು ಸುಬ್ರಮಣಿಯನ್‌ ಸ್ವಾಮಿ ಒತ್ತಾಯಿಸುತ್ತಿದ್ದಾರೆ.

ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ಪ್ರಕ್ರಿಯೆಯಿಂದ ಕೇಂದ್ರ ಸರ್ಕಾರ ಹಾಗೂ ದೆಹಲಿ ಪೊಲೀಸರು ಅಂತರ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.