ADVERTISEMENT

ಸುಬ್ರತೊ ಮನವಿ ತಳ್ಳಿಹಾಕಿದ `ಸುಪ್ರೀಂ'

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 11:27 IST
Last Updated 13 ಮಾರ್ಚ್ 2014, 11:27 IST
ಸುಬ್ರತೊ ರಾಯ್
ಸುಬ್ರತೊ ರಾಯ್   

ನವದೆಹಲಿ (ಐಎಎನ್‌ಎಸ್): ಹೂಡಿಕೆದಾರರ ಹಣ ಹಿಂತಿರುಗಿಸಬೇಕೆಂಬ ಕೋರ್ಟ್‌ನ ಆದೇಶ ಪಾಲಿಸದೇ ಜೈಲು ಸೇರಿರುವ ಸಹಾರಾ ಸಮೂಹದ ಮುಖ್ಯಸ್ಥ ಸುಬ್ರತೊ ರಾಯ್ ಅವರು ಬಿಡುಗಡೆ ಕೋರಿ ಸಲ್ಲಿಸಿದ ಮೇಲ್ಮನವಿಯನ್ನು ಗುರುವಾರ ಸುಪ್ರೀಂ ಕೋರ್ಟ್ ತಿರಸ್ಕರಿಸಿತು.

ಸದ್ಯ ತಿಹಾರ್ ಜೈಲಿನಲ್ಲಿರುವ ಸುಬ್ರತೊ ಅವರು ದೇಶ ಬಿಟ್ಟು ಹೊರಗಡೆ ತೆರಳದಂತೆ ಭರವಸೆಯೊಂದಿಗೆ ವೈಯಕ್ತಿಕ ಬಾಂಡ್ ಮೇಲೆ ತಮ್ಮನ್ನು ಬಿಡುಗಡೆಗೊಳಿಸಬೇಕೆಂದು ಕೋರ್ಟ್‌ಗೆ ಮನವಿ ಮಾಡಿಕೊಂಡಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಕೆ.ಎಸ್.ರಾಧಾಕೃಷ್ಣನ್ ಮತ್ತು ಜೆ.ಎಸ್.ಕೇಹರ್ ಅವರನ್ನು ಒಳಗೊಂಡ ಪೀಠವು ಸುಬ್ರತೊ ಪರ ವಕೀಲರಾದ ರಾಮ್ ಜೇಠ್ಮಲಾನಿ ಅವರಿಗೆ ಹೂಡಿಕೆದಾರರಿಗೆ ಹಿಂದಿರುಗಿಸಬೇಕಾದ ರೂ.19,000 ಕೋಟಿ ಬಾಕಿ ಮೊತ್ತವನ್ನು ಸುಬ್ರತೊ ಅವರು ಸೆಬಿಯಲ್ಲಿ ಠೇವಣಿ ಇಟ್ಟರೆ ಮಾತ್ರ ಜಾಮೀನು ನೀಡಲಾಗುವುದು ಎಂಬ ತಮ್ಮ ಈ ಹಿಂದಿನ ಆದೇಶವನ್ನು ಪುನರುಚ್ಚರಿಸಿದರು.

ಇದೇ ವೇಳೆ ಜೇಠ್ಮಲಾನಿ ಅವರು ಸದ್ಯ, ಒಟ್ಟು ಮೊತ್ತದಲ್ಲಿ ರೂ.2,500 ಕೋಟಿಯನ್ನು ಸುಬ್ರತೊ ಅವರು ಪಾವತಿಸಲು ಸಿದ್ಧರಿದ್ದಾರೆ ಎಂದು ಹೇಳಿದರು, ಆದರೆ ಇದನ್ನು ನ್ಯಾಯ ಪೀಠವು ತಿರಸ್ಕರಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.