ADVERTISEMENT

ಸುರಂಗದಲ್ಲಿ ಕೆಟ್ಟ ದೆಹಲಿ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ನವದೆಹಲಿ (ಐಎಎನ್‌ಎಸ್): ತಾಂತ್ರಿಕ ದೋಷದಿಂದಾಗಿ ಇಲ್ಲಿನ ಜಹಂಗೀರಪುರಿ-ಹೂಡಾ ನಗರ ನಡುವಿನ ಸುರಂಗ ಮಾರ್ಗದಲ್ಲಿ ಮೆಟ್ರೊ ರೈಲು ಕೆಟ್ಟು ನಿಂತಿದ್ದರಿಂದ ಮೆಟ್ರೊ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಎರಡು ಗಂಟೆಗೂ ಹೆಚ್ಚು ಸಮಯದ ಬಳಿಕ ಸಂಚಾರ ಪುನರಾರಂಭಗೊಂಡಿತು.

`ಕೇಂದ್ರೀಯ ಸಚಿವಾಲಯ ಮತ್ತು ಉದ್ಯೋಗ ಭವನ ಮೆಟ್ರೊ ನಿಲ್ದಾಣದ ಮಾರ್ಗ ಮಧ್ಯೆ ಇರುವ ಸುರಂಗ ಮಾರ್ಗದಲ್ಲಿ ಮಂಗಳವಾರ ಬೆಳಿಗ್ಗೆ 9.45ಕ್ಕೆ ರೈಲು ಕೆಟ್ಟು ಸುಮಾರು 20 ನಿಮಿಷಕ್ಕೂ ಹೆಚ್ಚು ಕಾಲ ಸ್ಥಗಿತಗೊಂಡಿತ್ತು. ಕೂಡಲೇ ರೈಲಿನಲ್ಲಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಇತರ ಪ್ರಯಾಣಿಕರನ್ನು ರೈಲಿನ ಮುಂಭಾಗ ಮತ್ತು ಕೊನೆಯಲ್ಲಿರುವ ತುರ್ತು ಹೊರಹೋಗುವ ದ್ವಾರದಿಂದ ಸುರಕ್ಷಿತವಾಗಿ ಕಳುಹಿಸಲಾಯಿತು. ಸುರಂಗದಿಂದ ಸ್ವಲ್ಪವೇ ದೂರದಲ್ಲಿದ್ದ ಕೇಂದ್ರೀಯ ಸಚಿವಾಲಯದ ನಿಲ್ದಾಣದವರೆಗೆ ಪ್ರಯಾಣಿಕರು ನಡೆದುಕೊಂಡು ಹೋದರು' ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.

`ಮೆಟ್ರೊ ತಾಂತ್ರಿಕ ಪರಿಣತರ ತಂಡ ರೈಲಿನಲ್ಲಿ ಕಾಣಿಸಿಕೊಂಡ ಸಮಸ್ಯೆಯನ್ನು ಪರಿಶೀಲಿಸಿ ನಿರ್ಬಂಧಿತ ಗತಿಯಲ್ಲಿ ರೈಲನ್ನು ಗ್ರೀನ್ ಪಾರ್ಕ್ ಮೆಟ್ರೊ ನಿಲ್ದಾಣಕ್ಕೆ ಒಯ್ದರು. ಇದೆಲ್ಲ ಮುಗಿಯಲು ಎರಡು ಗಂಟೆ ಸಮಯ ಹಿಡಿಯಿತು. ಜಹಂಗೀರಪುರಿ-ಹೂಡಾ ನಗರ ಮಾರ್ಗದಲ್ಲಿ ಅನೇಕ ರೈಲುಗಳ ಓಡಾಟ ವಿಳಂಬವಾಗಿದ್ದರಿಂದ ನಿಲ್ದಾಣಗಳಲ್ಲಿ ಸಾವಿರಾರು ಪ್ರಯಾಣಿಕರು ರೈಲಿಗಾಗಿ ಕಾದು ನಿಂತಿದ್ದರು' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.