ADVERTISEMENT

ಸುರಕ್ಷೆ ನಿರ್ಲಕ್ಷ್ಯ: ವಿಮಾನ ಸಂಸ್ಥೆಗಳಿಗೆ ಸರ್ಕಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ನವದೆಹಲಿ, (ಪಿಟಿಐ): ಆರ್ಥಿಕ ಮುಗ್ಗಟಿನ ನೆಪದಲ್ಲಿ ಸುರಕ್ಷಾ ಕ್ರಮಗಳನ್ನು ನಿರ್ಲಕ್ಷಿಸುತ್ತಿರುವ ವಿಮಾನಯಾನ ಸಂಸ್ಥೆಗಳ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಸುಲಭ ಮಾರ್ಗಗಳನ್ನು ಅನುಸರಿಸುವ ಮೂಲಕ ಸುರಕ್ಷತೆಯ ವಿಷಯದಲ್ಲಿ ರಾಜಿ ಮಾಡಿಕೊಳ್ಳಬಾರದು ಎಂದು ಸಂಸ್ಥೆಗಳಿಗೆ ಎಚ್ಚರಿಕೆ ನೀಡಿದೆ.

ಕಿಂಗ್‌ಫಿಷರ್ ಏರ್‌ಲೈನ್ಸ್ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಇದನ್ನು ತಿಳಿಸಿದ ನಿರ್ದೇಶನಾಲಯ, ನಿಗದಿತ ಸಮಯದೊಳಗೆ ಸುರಕ್ಷಾ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸಂಸ್ಥೆಗಳಿಗೆ ಸೂಚಿಸಿತು. ಅಲ್ಲದೆ ಈ ಕುರಿತು ಯೋಜನಾ ವರದಿಯನ್ನು ಸೋಮವಾರದೊಳಗೆ ತಮಗೆ ಸಲ್ಲಿಸಬೇಕೆಂದೂ ಕಿಂಗ್‌ಫಿಶರ್ ಮತ್ತು ಏರ್ ಇಂಡಿಯಾಗೆ ತಿಳಿಸಿತು.

ಇದಕ್ಕೆ ತಪ್ಪಿದಲ್ಲಿ ಕಿಂಗ್‌ಫಿಶರ್‌ನ ಪರವಾನಗಿ ರದ್ದತಿ ಮತ್ತು ಏರ್ ಇಂಡಿಯಾ ವಿಮಾನಗಳ ಕಾರ್ಯಾಚರಣೆಗೆ ಕಡಿವಾಣದಂತಹ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಎಚ್ಚರಿಕೆ ನೀಡಿತು.

`ಈ ಸಂಸ್ಥೆಗಳನ್ನು ಮುಚ್ಚುವ ಭೀತಿ ಇಲ್ಲ. ಮಾತ್ರವಲ್ಲ ವಿಮಾನಗಳ ಪರವಾನಗಿಯನ್ನು ರದ್ದುಪಡಿಸುವಷ್ಟರ ಮಟ್ಟಿಗೆ ಪರಿಸ್ಥಿತಿ ಬಿಗಡಾಯಿಸಿಲ್ಲ~ ಎಂದು ಡಿಜಿಸಿಎ ಮುಖ್ಯಸ್ಥ ಇ.ಕೆ.ಭರತ್ ಭೂಷಣ್ ಇದೇ ವೇಳೆ ಸ್ಪಷ್ಟಪಡಿಸಿದರು.

`ಎಲ್ಲ ವಿಮಾನಯಾನ ಸಂಸ್ಥೆಗಳೂ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿವೆ. ಆದರೆ ಈ ಬಿಕ್ಕಟ್ಟು ಸುರಕ್ಷೆಗೆ ಅಡ್ಡಿ ಉಂಟುಮಾಡದಂತೆ ಮುನ್ನಡೆಸಿಕೊಂಡು ಹೋಗುವ ಸವಾಲನ್ನು ಸಂಸ್ಥೆಗಳು ಸ್ವೀಕರಿಸಬೇಕಾಗಿದೆ. ಅಲ್ಲದೆ ಈ ವಿಷಯದಲ್ಲಿ ಸುಲಭದ ಮಾರ್ಗಗಳನ್ನು ಯಾರೂ ಅನುಸರಿಸದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ~ ಎಂದು ಅವರು ಒತ್ತಿ ಹೇಳಿದರು.

ವರದಿ ಸಲಹೆ: ವಿಮಾನಯಾನ ಕ್ಷೇತ್ರದಲ್ಲಿ ಆರ್ಥಿಕ ಬಿಕ್ಕಟ್ಟು ಕಾಣಿಸಿಕೊಂಡಿದೆ ಎಂದು ಡಿಜಿಸಿಎ ಹಣಕಾಸು ನಿಗಾ ವಿಭಾಗದ ವರದಿ ತಿಳಿಸಿದ್ದು, ಇದರಿಂದ ಹೊರಬರಲು ಎಲ್ಲ ಸಂಸ್ಥೆಗಳೂ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಸಲಹೆ ನೀಡಿದೆ.

ನಾಗರಿಕ ವಿಮಾನಯಾನ ಸಚಿವಾಲಯದ ಸುರಕ್ಷಾ ಸಲಹಾ ಮಂಡಳಿಯ ಶಿಫಾರಸಿನ ಮೇರೆಗೆ, ಡಿಜಿಸಿಎ ಇದೇ ಮೊದಲ ಬಾರಿಗೆ ಇಂಥ ಹಣಕಾಸು ಪರಿಶೋಧನೆಗೆ ಮುಂದಾಗಿತ್ತು. ಕಿಂಗ್‌ಫಿಶರ್ ಮತ್ತು ಏರ್‌ಇಂಡಿಯಾವನ್ನು ಗಮನದಲ್ಲಿಟ್ಟುಕೊಂಡು ಡಿಜಿಸಿಎ ಈ ಎಚ್ಚರಿಕೆ ನೀಡಿದ್ದರೂ ಉಳಿದ ವಿಮಾನಯಾನ ಸಂಸ್ಥೆಗಳಿಗೂ ಇದು ಅನ್ವಯವಾಗಲಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.