ADVERTISEMENT

ಸುರೇಶ್ ಕಲ್ಮಾಡಿಗೆ ಜಾಮೀನು

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST
ಸುರೇಶ್ ಕಲ್ಮಾಡಿಗೆ ಜಾಮೀನು
ಸುರೇಶ್ ಕಲ್ಮಾಡಿಗೆ ಜಾಮೀನು   

ನವದೆಹಲಿ (ಪಿಟಿಐ): 2010ರ ಕಾಮನ್‌ವೆಲ್ತ್ ಕ್ರೀಡಾಕೂಟಗಳ (ಸಿಡಬ್ಲ್ಯುಜಿ) ಕಾಮಗಾರಿಗೆ ಸಂಬಂಧಿಸಿದ ಭ್ರಷ್ಟಾಚಾರ ಹಗರಣಗಳಲ್ಲಿ ಪ್ರಮುಖ ಆರೋಪಿಯಾದ ಸಂಘಟನಾ ಸಮಿತಿಯ ಮಾಜಿ ಅಧ್ಯಕ್ಷ ಸುರೇಶ್ ಕಲ್ಮಾಡಿ ಅವರಿಗೆ ಸುಮಾರು ಒಂಬತ್ತು ತಿಂಗಳ ಸೆರೆವಾಸದ ಬಳಿಕ ದೆಹಲಿ ಹೈಕೋರ್ಟ್ ಗುರುವಾರ ಜಾಮೀನು ಮಂಜೂರು ಮಾಡಿದೆ.

ಜಾಮೀನು ದೊರೆತ ಹಿನ್ನೆಲೆಯಲ್ಲಿ ಕಲ್ಮಾಡಿ ಗುರುವಾರ ಸಂಜೆ 7.30ಕ್ಕೆ ತಿಹಾರ್ ಜೈಲಿನಿಂದ ಹೊರನಡೆದರು.
ಇದಲ್ಲದೆ, ಸಹ ಆರೋಪಿಯಾದ ಸಂಘಟನಾ ಸಮಿತಿಯ ಮಾಜಿ ಮಹಾ ನಿರ್ದೇಶಕ ವಿ.ಕೆ. ವರ್ಮ ಅವರಿಗೂ ಹೈಕೋರ್ಟ್ ಜಾಮೀನು ನೀಡಿದೆ.
 
ಈ ಇಬ್ಬರಿಗೂ ಜಾಮೀನು ಮಂಜೂರು ಮಾಡಿದ ನ್ಯಾಯಮೂರ್ತಿ ಮುಕ್ತಾ ಗುಪ್ತ ಅವರು, ವಿಚಾರಣಾ ನ್ಯಾಯಾಲಯದ ಮುಂದೆ ತಲಾ 5 ಲಕ್ಷ ರೂಪಾಯಿಗಳ ಬಾಂಡ್ ಮತ್ತು ಇಷ್ಟೇ ಮೊತ್ತದ ಎರಡು ಭದ್ರತಾ ಠೇವಣಿಗಳನ್ನು ಸಲ್ಲಿಸುವಂತೆ ಆದೇಶಿಸಿದರು.

`ಅರ್ಜಿದಾರರು ನ್ಯಾಯಾಂಗದಿಂದ ತಪ್ಪಿಸಿಕೊಳ್ಳುವ ಮತ್ತು ವಿಚಾರಣೆಗೆ ಲಭ್ಯರಾಗದಿರುವ ಯಾವುದೇ ಸಾಧ್ಯತೆಗಳಿರುವ ಆರೋಪಗಳಿಲ್ಲದ ಕಾರಣ ಜಾಮೀನು ನೀಡುತ್ತಿದ್ದೇನೆ~ ಎಂದು ತಿಳಿಸಿದ ಮುಕ್ತಾ, ಇಬ್ಬರಿಗೂ ವಿಚಾರಣಾ ನ್ಯಾಯಾಲಯದ ಪೂರ್ವ ಅನುಮತಿ ಇಲ್ಲದೆ ದೇಶ ಬಿಟ್ಟು ಹೋಗದಂತೆ ನಿರ್ದೇಶನ ನೀಡಿದರು.

ಕಾಮನ್‌ವೆಲ್ತ್ ಕ್ರೀಡಾಕೂಟಗಳ ಸಮಯ, ಪಾಯಿಂಟ್ ಹಾಗೂ ಫಲಿತಾಂಶ ಪ್ರಕಟ ವ್ಯವಸ್ಥೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿ ಹಗರಣಕ್ಕೆ ಸಂಬಂಧಿಸಿದ ಆರೋಪಿಗಳಾಗಿ ಕಲ್ಮಾಡಿ ಮತ್ತು ವರ್ಮ ಅವರನ್ನು ಕ್ರಮವಾಗಿ 2011ರ ಏಪ್ರಿಲ್ 25 ಮತ್ತು ಫೆಬ್ರುವರಿ 23ರಂದು ಸಿಬಿಐ ಬಂಧಿಸಿದ್ದನ್ನು ಸ್ಮರಿಸಬಹುದು.

ಸುಪ್ರೀಂಕೋರ್ಟ್, ವಿವಾದಿತ 2ಜಿ ಸ್ಪೆಕ್ಟ್ರಂ ಹಗರಣದಲ್ಲಿ `ಜಾಮೀನುವೊಂದು ನಿಯಮ ಮತ್ತು ಜೈಲುವೊಂದು ಅಪವಾದ~ ಎಂದು ತಿಳಿಸಿರುವುದರ ಆಧಾರದಲ್ಲಿ ಆರೋಪಿಗಳಿಗೆ ಜಾಮೀನು ಅರ್ಜಿ ಸಲ್ಲಿಸಲು ಅವಕಾಶ ನೀಡಿದ ಮುಕ್ತಾ, `ಅರ್ಜಿದಾರರಿಗೆ ಹಣ ಸಂದಾಯವಾದ ಯಾವುದೇ ಆರೋಪವಿಲ್ಲ, ಅರ್ಜಿದಾರರು ಯಾವುದೇ ಸಾಕ್ಷಿಗೆ ಬೆದರಿಕೆ ಹಾಕುತ್ತಿರುವ ಅಥವಾ ತನಿಖೆ ಇಲ್ಲವೆ ವಿಚಾರಣೆ ಸಂದರ್ಭದಲ್ಲಿ ಸಾಕ್ಷಿಗಳಿಗೆ ಹಸ್ತಕ್ಷೇಪ ನಡೆಸಿರುವ ಯಾವುದೇ ಸಾಕ್ಷಿಯಿಲ್ಲ~ ಎಂದು ಹೇಳಿದರು.

2ಜಿ ಹಗರಣದಲ್ಲಿ ಆರೋಪಿಗಳಿಗೆ ಸುಪ್ರೀಂಕೋರ್ಟ್ ಜಾಮೀನು ನೀಡಿರುವಂತೆ ಕಾಮನ್‌ವೆಲ್ತ್ ಹಗರಣದಲ್ಲೂ ನೀಡಲು ಕೋರಿ ಕಲ್ಮಾಡಿ ಜನವರಿ ಆರಂಭದಲ್ಲಿ ದೆಹಲಿ ಹೈಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು. ತಮ್ಮ ವಿರುದ್ಧ ಆರೋಪಪಟ್ಟಿಯನ್ನು ಮಾತ್ರ ಸಲ್ಲಿಸಲಾಗಿದ್ದು, ಇದರ ವಿಚಾರಣೆ ಸದ್ಯದಲ್ಲಿ ಆರಂಭವಾಗುವ ಸಾಧ್ಯತೆಗಳಿಲ್ಲದ ಕಾರಣ ಜಾಮೀನು ನೀಡುವಂತೆ ಕೋರಿದ್ದರು.

ಆದರೆ ಸಿಬಿಐ ಮಾತ್ರ ಕಲ್ಮಾಡಿ ಮತ್ತು ವರ್ಮ ಅವರಿಗೆ ಜಾಮೀನು ನೀಡದಂತೆ ವಿರೋಧ ವ್ಯಕ್ತಪಡಿಸಿ, ವಿಚಾರಣಾ ನ್ಯಾಯಾಲಯವು ಜನವರಿ 4ರಂದು ನೀಡಿದ ತನ್ನ ಆದೇಶದಲ್ಲಿ ದಾಖಲಾತಿಗಳ ಪರಿಶೀಲನೆ ನಂತರ ದಿನನಿತ್ಯದ ಆಧಾರದಲ್ಲಿ ಪ್ರಕರಣವನ್ನು ಆಲಿಸಲು ನಿರ್ಧರಿಸಿರುವುದನ್ನು ತಿಳಿಸಿತು.

ಕಲ್ಮಾಡಿ, ವರ್ಮ ಹಾಗೂ ಇತರ ಒಂಬತ್ತು ಆರೋಪಿಗಳು, ಸ್ವೀಸ್ ಸಂಸ್ಥೆಯೊಂದಕ್ಕೆ ಕ್ರೀಡಾಕೂಟಗಳ ಸಮಯ, ಪಾಯಿಟ್ ಹಾಗೂ ಫಲಿತಾಂಶ ಪ್ರಕಟ ವ್ಯವಸ್ಥೆಯ ಸಲಕರಣೆಗಳ ಸ್ಥಾಪನೆಯ ಗುತ್ತಿಗೆಯನ್ನು ಅಗತ್ಯಕ್ಕಿಂತ ಹೆಚ್ಚಿನ ದರಕ್ಕೆ ನೀಡಿ, ಸರ್ಕಾರದ ಬೊಕ್ಕಸಕ್ಕೆ ರೂ 90 ಕೋಟಿಗಳ ನಷ್ಟ ಉಂಟು ಮಾಡಿರುವುದಾಗಿ ಆರೋಪಿಸಲಾಗಿದೆ.
 
ಸಿಬಿಐ 2011ರ ಮೇನಲ್ಲಿ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಕಲ್ಮಾಡಿ ಅವರನ್ನು ಮುಖ್ಯ ಆರೋಪಿಯಾಗಿ ಪರಿಗಣಿಸಿದ್ದು, ವರ್ಮ ಮತ್ತು ಇತರರನ್ನು ಸಹ ಆರೋಪಿಗಳಾಗಿ ಗುರುತಿಸಿದೆ. ಎಕೆಆರ್ ಕನ್‌ಸ್ಟ್ರಕ್ಷನ್ಸ್ ಮತ್ತು ಸ್ವಿಸ್ ಟೈಮಿಂಗ್ ಕಂಪೆನಿಗಳು ಕೂಡಾ ಇದರಲ್ಲಿ ಆರೋಪಿಗಳಾಗಿವೆ.

ಈ ಹಿನ್ನೆಲೆಯಲ್ಲಿ ಎಲ್ಲ ಆರೋಪಿಗಳ ವಿರುದ್ಧವೂ ಅಪರಾಧ ಸಂಚು, ದಾಖಲಾತಿ ತಿದ್ದುಪಡಿ ಹಾಗೂ ನಕಲಿ ದಾಖಲುಪತ್ರಗಳ ಬಳಕೆಯೊಂದಿಗೆ ಭ್ರಷ್ಟಾಚಾರ ನಿಗ್ರಹ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಕಾಯ್ದೆಗಳಡಿ ಶಿಕ್ಷೆ ವಿಧಿಸುವಂತೆ ವಿಶೇಷ ಸಿಬಿಐ ನ್ಯಾಯಾಲಯ 2011ರ ಮೇ 23ರಂದು ಆದೇಶ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT