ADVERTISEMENT

ಸುಶಿಕ್ಷಿತರು ವೇಶ್ಯಾವಾಟಿಕೆಗೆ: ಸುಪ್ರೀಂಕೋರ್ಟ್ ಆತಂಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2012, 19:30 IST
Last Updated 27 ಜನವರಿ 2012, 19:30 IST

ನವದೆಹಲಿ (ಪಿಟಿಐ): ಐಷಾರಾಮಿ ಜೀವನ ಶೈಲಿಯ ಖಯಾಲಿಗೆ ಬಿದ್ದು ಒಳ್ಳೆಯ ಮನೆತನದ ಸುಶಿಕ್ಷಿತ ಹೆಣ್ಣುಮಕ್ಕಳೂ ವೇಶ್ಯಾವಾಟಿಕೆಗೆ ಇಳಿಯುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ವಿವರಿಸುವಂತೆ ಸರ್ಕಾರಕ್ಕೆ ಶುಕ್ರವಾರ ಸೂಚನೆ ನೀಡಿದೆ.

`ಸುಸಂಸ್ಕೃತ ಮನೆತನದ ಹೆಣ್ಣು ಮಕ್ಕಳು ವಿಶ್ವವಿದ್ಯಾಲಯ ಹಂತದ ಶಿಕ್ಷಣದಲ್ಲಿಯೇ ಇಂಥ ಮಾರ್ಗ ಹಿಡಿಯುತ್ತಾರೆ. ಸ್ವಯಂ ಪ್ರೇರಿತವಾಗಿ ಈ ದಂಧೆಯನ್ನು ಆರಿಸಿಕೊಳ್ಳುವ ಇಂಥ ಹೆಣ್ಣು ಮಕ್ಕಳಿಗೆ ನೀವೇನು ಕಾರ್ಯಕ್ರಮ ಹಮ್ಮಿಕೊಂಡಿದ್ದೀರಿ~ ಎಂದು ವಕೀಲ ಪ್ರದೀಪ್ ಘೋಷ್ ಅವರನ್ನು ಕೋರ್ಟ್ ಪ್ರಶ್ನಿಸಿತು.
ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಹಾಗೂ ಇನ್ನಿತರ ಕ್ರಮಗಳನ್ನು ಪರಾಮರ್ಶಿಲು ರಚನೆಯಾದ ವಿಶೇಷ ಸಮಿತಿಯ ಪ್ರಮುಖರಲ್ಲಿ ಘೋಷ್ ಕೂಡ ಒಬ್ಬರು.

ಸಮಿತಿಯು ತನ್ನ ಕಾರ್ಯಗಳನ್ನು ನಡೆಸಲು ಕಾನೂನು ಆಯೋಗದಲ್ಲಿ ಇನ್ನು ಮೂರು ವಾರಗಳೊಳಗೆ ಸೂಕ್ತ ನೆಲೆ ಕಲ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಅಲ್ತಮಸ್ ಕಬೀರ್ ಹಾಗೂ ಜ್ಞಾನ ಸುಧಾ ಮಿಶ್ರಾ ಅವರನ್ನು ಒಳಗೊಂಡ ಪೀಠವು, ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಪಿ.ಮಲ್ಹೋತ್ರಾ ಅವರಿಗೆ ನಿರ್ದೇಶನ ನೀಡಿತು.

ಲೈಂಗಿಕ ಕಾರ್ಯಕರ್ತೆಯರ ಪುನರ್ವಸತಿ ಕಾರ್ಯವು ಕಣ್ಣೊರೆಸುವ ತಂತ್ರವಾಗಬಾರದು. ಈ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯಗಳು ಈ ದಿಸೆಯಲ್ಲಿ ತೆಗೆದುಕೊಂಡ ಕ್ರಮಗಳನ್ನು ನಿರಂತರವಾಗಿ ಗಮನಿಸಲಾಗುತ್ತದೆ ಎಂದು ವಿಚಾರಣೆ ವೇಳೆ ಪೀಠ ಎಚ್ಚರಿಕೆ ನೀಡಿತು.

ಈ ವಿಷಯವಾಗಿ ನಾವು ನಿರಂತರವಾಗಿ ಸಮ್ಮೇಳನ ಹಾಗೂ ವಿಚಾರ ಸಂಕಿರಣಗಳನ್ನು ನಡೆಸಿ ಕೈತೊಳೆದುಕೊಂಡು ಬಿಡುತ್ತೇವೆ. ನಾವು ಈ ನಿಟ್ಟಿನಲ್ಲಿ ಏನಾದರೂ ಮಾಡಬೇಕಿದೆ. ಅದು ನಮ್ಮ ಆತ್ಮಸಾಕ್ಷಿಯನ್ನು ಮೆಚ್ಚಿಸುವಂತೆ ಇರಬೇಕು. ಕೇವಲ ಕಣ್ಣೊರೆಸುವ ಪ್ರಯತ್ನವಾಗಬಾರದು ಎಂದು ಪೀಠ ಹೇಳಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.