ADVERTISEMENT

ಸೆನ್ ತಾಯಿಗೆ ಡಬಲ್ ಖುಷಿ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 19:30 IST
Last Updated 15 ಏಪ್ರಿಲ್ 2011, 19:30 IST
ಸೆನ್ ತಾಯಿಗೆ ಡಬಲ್ ಖುಷಿ
ಸೆನ್ ತಾಯಿಗೆ ಡಬಲ್ ಖುಷಿ   

ನವದೆಹಲಿ/ ಕಲ್ಯಾಣಿ (ಪಶ್ಚಿಮ ಬಂಗಾಳ): ‘ಛತ್ತೀಸಗಡ ಹೈಕೋರ್ಟ್ ನನ್ನ ಮಗನಿಗೆ ಜಾಮೀನು ನಿರಾಕರಿಸಿದ್ದಾಗ ನನ್ನ ಆತ್ಮಸ್ಥೈರ್ಯ ಕುಗ್ಗಿಹೋಗಿತ್ತು. ನನ್ನ ಮಗನನ್ನು ಮತ್ತೆ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂಬ ಚಿಂತೆ ಆವರಿಸಿತ್ತು. ಇದೀಗ ಈ ತೀರ್ಪಿನಿಂದ ರಾಷ್ಟ್ರದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ಪುನಃ ನಂಬಿಕೆ ಮೂಡಿದೆ’ ಎಂದು ಕಲ್ಯಾಣಿಯ ತಮ್ಮ ನಿವಾಸದಲ್ಲಿರುವ ಸೆನ್ ಅವರ ತಾಯಿ ಅನುಸೂಯಾ ಸೆನ್ ಹರ್ಷ ವ್ಯಕ್ತಪಡಿಸಿದ್ದಾರೆ.

 ಅನಾರೋಗ್ಯದಿಂದ ಅಸ್ವಸ್ಥಗೊಂಡಿದ್ದರೂ ಬಂಗಾಳದ ಹೊಸ ವರ್ಷದ ಸಂದರ್ಭದಲ್ಲೇ ಶುಭ ಸುದ್ದಿ ಬಂದಿರುವುದಕ್ಕೆ ಖುಷಿಯಾಗಿರುವ ಅವರು ಇದೇ ವೇಳೆ ‘ಸತ್ಯಮೇಯ ಜಯತೇ’ ಎಂದು ಉಚ್ಚರಿಸಿದ್ದಾರೆ.

ಈ ತೀರ್ಪನ್ನು ಗೌರವಿಸುವುದಾಗಿ ಛತ್ತೀಸಗಡ ಮುಖ್ಯಮಂತ್ರಿ ರಮಣಸಿಂಗ್ ಹೇಳಿದ್ದರೆ, ರಾಷ್ಟ್ರದ ವಿವಿಧ ಗಣ್ಯರು ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಸೆನ್ ಅವರಿಗೆ ಜಾಮೀನು ಸಿಕ್ಕಿರುವುದರಿಂದ ಸಂತಸವಾಗಿದೆ. ವಿಚಾರಣಾ ನ್ಯಾಯಾಲಯಗಳ ಆದೇಶದಿಂದ ವಿರುದ್ಧ ಅಸಮಾಧಾನವಿದ್ದರೆ ಮೇಲಿನ ಹಂತದ ನ್ಯಾಯಾಲಯಗಳ ಮೊರೆ ಹೋಗುವ ಮೂಲಕ ನ್ಯಾಯ ಪಡೆಯಬಹುದು ಎಂಬುದು ಮೊದಲಿನಿಂದಲೂ ನನ್ನ ನಂಬಿಕೆಯಾಗಿದೆ’ ಎಂದು ಗೃಹ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.

‘ಸುಪ್ರೀಂಕೋರ್ಟಿನ ತೀರ್ಪಿನ ಬಗ್ಗೆ ನಾವು ಯಾವಾಗಲೂ ಗೌರವಭಾವ ಹೊಂದಿದ್ದು, ಈಗಲೂ ಅದಕ್ಕೆ ತಲೆಬಾಗುವುದಾಗಿ’ ಛತ್ತೀಸ್‌ಗಡ ಮುಖ್ಯಮಂತ್ರಿ ರಮಣ ಸಿಂಗ್ ಹೇಳಿದ್ದಾರೆ.

ಸುಪ್ರೀಂಕೋರ್ಟ್ ಜಾಮೀನು ನೀಡುವಂತೆ ಮಾತ್ರ ಆದೇಶಿಸಿದೆ. ಆದರೆ ಸೆನ್ ಅವರ ವಿರುದ್ಧ ವಿಲಾಸ್‌ಪುರದ ಹೈಕೋರ್ಟಿನಲ್ಲಿರುವ ಬಾಕಿ ಪ್ರಕರಣಗಳ ವಿಚಾರಣಾ ಪ್ರಕ್ರಿಯೆ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

‘ಸಾಮಾನ್ಯವಾಗಿ ದಾವೆಯ ಗೆಲುವು ಅಥವಾ ಸೋಲಿನ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ಸೆನ್ ಅವರಿಗೆ ಜಾಮೀನು ದೊರೆತಿರುವ ಈ ತೀರ್ಪಿನಿಂದ ತುಂಬಾ ಸಂತಸವಾಗಿದೆ’ ಎಂದು ಸೆನ್ ಪರ ವಕೀಲರಾದ ರಾಂ ಜೇಠ್ಮಲಾನಿ ಪ್ರತಿಕ್ರಿಯಿಸಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಚಲಾಯಿಸುವ ಹಕ್ಕು ಇದೆ ಎಂಬುದನ್ನು ಈ ತೀರ್ಪು ಎತ್ತಿಹಿಡಿದಿದೆ.
ಸೆನ್ ಯಾವುದೇ ತರಹದ ಹಿಂಸೆಯಲ್ಲಿ ಭಾಗಿಯಾಗಿಲ್ಲ ಅಥವಾ ಹಿಂಸೆಯ ಹಾದಿ ಹಿಡಿಯುವಂತೆ ಬೇರೆಯವನ್ನು ಒತ್ತಾಯಿಸಿಲ್ಲ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ.

ರಾಷ್ಟ್ರದ್ರೋಹದ ಕಾನೂನನ್ನು ಓಬೀರಾಯನ ಕಾಲದ ನಿಯಮಾವಳಿ ಎಂದು ವ್ಯಂಗ್ಯವಾಡಿರುವ ಕಾನೂನು ಸಚಿವ ಎಂ.ವೀರಪ್ಪ ಮೊಯಿಲಿ, ಈ ಬಗ್ಗೆ ಪರಾಮರ್ಶೆ ನಡೆಸಲು ಕಾನೂನು ಆಯೋಗಕ್ಕೆ ಸೂಚಿಸುವುದಾಗಿ ತಿಳಿಸಿದ್ದಾರೆ.

ಛತ್ತೀಸಗಡ ಪೊಲೀಸರು ನಡೆಸಿದ್ದ ತನಿಖೆಯ ವೈಖರಿಯ ಬಗ್ಗೆಯೂ ಈ ತೀರ್ಪು ಬೆಳಕು ಚೆಲ್ಲುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸೆನ್ ಅವರ ವಿರುದ್ಧದ ಈ ಮುಂಚಿನ ತೀರ್ಪುಗಳ ಬಗ್ಗೆ ಜನಸಾಮಾನ್ಯರಲ್ಲಿ ಅಸಮಾಧಾನ ಮನೆಮಾಡಿತ್ತು. ಈಗ ಈ ತೀರ್ಪನ್ನು ಸ್ವಾಗತಿಸಬೇಕಾಗಿದೆ ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದ್ದಾರೆ.

ತೀರ್ಪನ್ನು ಸ್ವಾಗತಿಸಿದ ಸಿಪಿಐ, ಸೆನ್ ವಿರುದ್ಧದ ಎಲ್ಲಾ ಮೊಕದ್ದಮೆಗಳನ್ನೂ ಛತ್ತೀಸ್‌ಗಡದ ಬಿಜೆಪಿ ಸರ್ಕಾರ ರದ್ದು ಮಾಡಬೇಕು ಎಂದು ಒತ್ತಾಯಿಸಿದೆ.

ಸಿಪಿಐನ ಸಾವಿರಾರು ಕಾರ್ಯಕರ್ತರು ಜೈಲುಗಳಲ್ಲಿ ವಿನಾಕಾರಣ ಬಂಧಿಗಳಾಗಿ ಕೊಳೆಯುತ್ತಿದ್ದಾರೆ. ಅವರೆಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.